ADVERTISEMENT

ಕುರ್ಚಿಗೋಸ್ಕರ ಹಿಂದುಳಿದವರ ಆತ್ಮದ್ರೋಹ ಕೆಲಸ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 18:50 IST
Last Updated 27 ಫೆಬ್ರುವರಿ 2011, 18:50 IST
ಕುರ್ಚಿಗೋಸ್ಕರ ಹಿಂದುಳಿದವರ ಆತ್ಮದ್ರೋಹ ಕೆಲಸ
ಕುರ್ಚಿಗೋಸ್ಕರ ಹಿಂದುಳಿದವರ ಆತ್ಮದ್ರೋಹ ಕೆಲಸ   

ಬೆಂಗಳೂರು: ‘ರಾಜಕೀಯದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡಿಸಲು ಈ ವರ್ಗದ ನಾಯಕರಲ್ಲೇ ಆಸಕ್ತಿ ಇಲ್ಲ. ತಮ್ಮ ಕುರ್ಚಿಗೋಸ್ಕರ ಅವರು ಆತ್ಮದ್ರೋಹದ ಕೆಲಸ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುರುಬರ ಸಂಘದ ವಿದ್ಯಾರ್ಥಿ ನಿಲಯಗಳ ಹಳೆ ವಿದ್ಯಾರ್ಥಿಗಳ ಸಂಘವು ಕನಕ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿಚಾರಗೋಷ್ಠಿ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬರೀ ಮೇಲ್ವರ್ಗದವರ ಪಿತೂರಿಯಿಂದಷ್ಟೇ ಅಲ್ಲದೇ, ಹಿಂದುಳಿದ ಜನಾಂಗದ ನಾಯಕರ ಗುಲಾಮಗಿರಿಯಿಂದಾಗಿಯೂ ದಕ್ಕಬೇಕಾದ ಮೀಸಲಾತಿ ಇದುವರೆಗೂ ದಕ್ಕಿಲ್ಲ. ನಾವು ಪ್ರಶ್ನೆ ಮಾಡದೆ ಹಾಗೆಯೇ ಕುಳಿತರೆ ಎಂದಿಗೂ ಸಿಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಧ್ವನಿ ಎತ್ತಿಲ್ಲ ಏಕೆ? ‘ಉಡುಪಿ ಶ್ರೀಕೃಷ್ಣ ಮಠ ಬ್ರಾಹ್ಮಣರಿಗೆ ಸೇರಿದ್ದಲ್ಲ’ ಎಂದು ಸುಪ್ರೀಂಕೋರ್ಟ್ 1961ರಲ್ಲೇ ತೀರ್ಪು ನೀಡಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಸೇರಿಕೊಂಡು ದೇವಸ್ಥಾನವನ್ನು ಉಡುಪಿ ಮಠಕ್ಕೆ ನೀಡುವಲ್ಲಿ ಯಶಸ್ವಿಯಾದರು. ಇದನ್ನು ಯಾರಾದರೂ ಪ್ರಶ್ನೆ ಮಾಡಿದಿರಾ ಎಂದು ಸಭೆಯಲ್ಲಿದ್ದವರನ್ನು ಪ್ರಶ್ನಿಸಿದರು.

ಒಂದು ಕಾಲಕ್ಕೆ ಹಿಂದುಳಿದವರಿಗೆ ರಾಜಕೀಯ ಪ್ರಾತಿನಿಧ್ಯ ಶೇ 40 ಇತ್ತು. ‘ಈ ಮೀಸಲಾತಿ ಸರಿ ಇಲ್ಲ’ ಎಂದು ರಾಜ್ಯಸಭೆ ಸದಸ್ಯ ರಾಮಾ ಜೋಯಿಸ್ ಮತ್ತಿತರರು ಕೋರ್ಟ್‌ಗೆ ಹೋಗಿದ್ದರು. ಈ ಪ್ರಮಾಣ ಈಗ ಶೇ 21ಕ್ಕೆ ಇಳಿದಿದೆ. ಈ ಅನ್ಯಾಯದ ಬಗ್ಗೆ ಯಾರಾದರೂ ಧ್ವನಿ ಎತ್ತಿದ್ದಾರಾ ಎಂದೂ ಆಕ್ರೋಶದಿಂದ ಕೇಳಿದರು. ಇದಕ್ಕೂ ಮುನ್ನ ‘ಸಂವಿಧಾನದ ಆಶಯಗಳು ಮತ್ತು ಪ್ರಸಕ್ತ ರಾಜಕಾರಣ’ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ, ‘ವೈಜ್ಞಾನಿಕ ಹಾಗೂ ವೈಚಾರಿಕ ತತ್ವಗಳನ್ನು ಅನುಸರಿಸಿ ರಾಜ್ಯಾಡಳಿತ ಮಾಡಬೇಕು ಎಂದು ರಾಜ್ಯಾಂಗ ಹೇಳಿದೆ. ಆದರೆ ಮಾಟ-ಮಂತ್ರ ಎಂದು ಹೇಳುತ್ತಾ ಕಂಡ ಕಂಡ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರೆಯಲು ಅನರ್ಹರು’ ಎಂದರು.

‘ಹಿಂದುಳಿದ ವರ್ಗಗಳು ಮತ್ತು ಸಾಮಾಜಿಕ ನ್ಯಾಯ’ ಕುರಿತು ಮಾತನಾಡಿದ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್,  ‘ರಾಜ್ಯದ ಹೋಟೆಲ್, ಸಿನಿಮಾ, ಖಾಸಗಿ ಸಾರಿಗೆ, ವ್ಯಾಪಾರ-ಕೈಗಾರಿಕೆ, ಲೇವಾದೇವಿ ವ್ಯವಹಾರವು ರಾಜ್ಯದಲ್ಲಿ ಪ್ರಬಲರಾಗಿರುವ ಲಿಂಗಾಯತ- ಒಕ್ಕಲಿಗರ ನಿಯಂತ್ರಣದಲ್ಲಿವೆ. ಆದ್ದರಿಂದ ಹಿಂದುಳಿದವರು ನಿರ್ಣಾಯಕ ಪಾತ್ರ ವಹಿಸುವ ಅವಕಾಶ ಬಂದಿಲ್ಲ. ಬರೀ ಸಣ್ಣ ರೈತರಾಗಿ ಬೇಸಾಯದಲ್ಲಿ ತೊಡಗಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಕಾರ್ಯಾಧ್ಯಕ್ಷ ಕೆ.ಲಿಂಗಪ್ಪ, ವಿದ್ಯುತ್  ಸರಬರಾಜು ನಿಗಮದ ನಿವೃತ್ತ ಸೂಪರಿಂಟೆಂಡ್ ಎಂಜಿನಿಯರ್ ರಾಜ್‌ಕುಮಾರ್, ನಿವೃತ್ತ ಶಿಕ್ಷಣಾಧಿಕಾರಿ ಯಲ್ಲಮ್ಮ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರೊ.ಎಂ.ನಾಗರಾಜ್, ಹಳೆಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಆರ್.ಎಸ್.ಪೊಂಡೆ ಹಾಗೂ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ ಅವರು ಉಪಸ್ಥಿತರಿದ್ದರು.

‘ಇಲ್ಲಿಯೂ ಮುಖ್ಯಮಂತ್ರಿ ಆಗೋಲ್ಲ’
ಜೆಡಿಎಸ್‌ನಿಂದ ಹೊರಬಂದ ಬಗೆಯನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು, ‘ಅಹಿಂದ ಸಮಾವೇಶ ಮಾಡಬೇಡ ಎಂದು ಪಕ್ಷದ ನಾಯಕರು ಹೇಳಿದರು. ಆದರೆ ನಾನು ಅವರ ಮಾತನ್ನು ಕೇಳಲಿಲ್ಲ’ ಎಂದರು. ‘ಸಮಾವೇಶದ ಅಗತ್ಯ ಇತ್ತು, ಮಾಡಿದೆವು. ಆದ್ದರಿಂದಲೇ ನನ್ನನ್ನು ಪಕ್ಷದಿಂದ ತೆಗೆದುಹಾಕಿದರು. ಆದರೆ ನಾನೇ ಪಕ್ಷವನ್ನು ಬಿಟ್ಟೆ ಎಂದು ಪ್ರಚಾರ ಮಾಡಲಾಯಿತು. ಆದರೆ ಅಲ್ಲಿದ್ದರೂ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಇಲ್ಲಿಯೂ (ಕಾಂಗ್ರೆಸ್‌ನಲ್ಲಿ)  ಮುಖ್ಯಮಂತ್ರಿಯಾಗುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.