ವಿಜಾಪುರ: `ಬಹು ನಿರೀಕ್ಷಿತ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಕಾರ್ಯ ತಿಂಗಳಲ್ಲಿ ಆರಂಭಗೊಳ್ಳಲಿದೆ. 52 ತಿಂಗಳ ನಂತರ ಮೊದಲ ಹಂತದ 2,400 ಮೆ.ವಾ ವಿದ್ಯುತ್ ಉತ್ಪಾದನೆಯಾಗಲಿದೆ~ ಎಂದು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಕೂಡಗಿ ಸ್ಥಾವರದ ಪ್ರಧಾನ ವ್ಯವಸ್ಥಾಪಕ ಆಸಿಮ್ ಕುಮಾರ ಸಮಂತಾ ಹೇಳಿದರು.
`ಎನ್‌ಟಿಪಿಸಿ ಕರ್ನಾಟಕದಲ್ಲಿ ಆರಂಭಿಸುತ್ತಿರುವ ಮೊದಲ ಘಟಕ ಇದು. ಈ ಸ್ಥಾವರ ಸ್ಥಾಪನೆಗೆ ಸ್ಥಳೀಯರೂ ಸೇರಿದಂತೆ ಎಲ್ಲರಿಂದ ಉತ್ತಮ ಸಹಕಾರ ದೊರೆಯುತ್ತಿದೆ. ರಾಜ್ಯ ಸರ್ಕಾರವೂ ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ~ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಜಿಲ್ಲೆಯ ಕೂಡಗಿಯಲ್ಲಿ 4,000 ಮೆ.ವಾ ಸಾಮರ್ಥ್ಯದ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಇಲಾಖೆಗಳ ಅನುಮತಿ ದೊರೆತಿದೆ. ಮೊದಲ ಹಂತದಲ್ಲಿ 800 ಮೆ.ವಾ ಸಾಮರ್ಥ್ಯದ ತಲಾ ಮೂರು ಹಾಗೂ ಎರಡನೇ ಹಂತದಲ್ಲಿ 800 ಮೆ.ವಾ ಸಾಮರ್ಥ್ಯದ ಎರಡು ಘಟಕಗಳನ್ನು ಸ್ಥಾಪಿಸಲಾಗುವುದು~ ಎಂದರು.
`ಮೊದಲ ಮೂರು ಘಟಕಗಳ ಸ್ಥಾಪನೆಗೆ 15,166 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಘಟಕಗಳಿಗೆ ಬೇಕಾಗುವ 6,087 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳ ಖರೀದಿಗೆ ಒಪ್ಪಂದವಾಗಿದೆ. ಯೋಜನೆಗೆ ಬೇಕಾದ 3,500 ಎಕರೆ ಭೂಮಿ ಪೈಕಿ ಈಗ 1,923 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಅಗತ್ಯವಿರುವ 162 ಕ್ಯೂಸೆಕ್ಸ್ ನೀರನ್ನು ಅಲಮಟ್ಟಿ ಜಲಾಶಯದಿಂದ ಪಡೆಯಲಾಗುವುದು. 3,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ~ ಎಂದರು.
`ಈ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ 50ರಷ್ಟು ಕರ್ನಾಟಕಕ್ಕೆ ಲಭ್ಯವಾಗಲಿದೆ. ಉಳಿದ ವಿದ್ಯುತ್ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಪುದುಚೆರಿಗಳಿಗೆ ಪೂರೈಕೆಯಾಗಲಿದೆ~ ಎಂದು ಹೇಳಿದರು.
`1975ರಲ್ಲಿ ಸ್ಥಾಪನೆಯಾಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ದೇಶದ ಒಟ್ಟು ಬೇಡಿಕೆಯ ಶೇ 28ರಷ್ಟು ವಿದ್ಯುತ್ ಪೂರೈಸುತ್ತಿದೆ. ಕರ್ನಾಟಕದ ಬೇಡಿಕೆಯ ಶೇ 40ರಷ್ಟು ವಿದ್ಯುತ್ ಅನ್ನು ನಿಗಮ ಪೂರೈಸುತ್ತಿದೆ.
ಕಲ್ಲಿದ್ದಲು ಆಧರಿತ 15 ಹಾಗೂ ಗ್ಯಾಸ್ ಆಧರಿತ 17 ಘಟಕಗಳಿಂದ 36,014 ಮೆ.ವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. 2020ರ ವೇಳೆಗೆ 1.28 ಲಕ್ಷ ಮೆ.ವಾ ವಿದ್ಯುತ್ ಉತ್ಪಾದಿಸುವ ಗುರಿಯಿದೆ. ದೇಶದ ವಿವಿಧೆಡೆ 15,333 ಮೆ.ವಾ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಘಟಕಗಳು ನಿರ್ಮಾಣ ಹಂತದಲ್ಲಿವೆ~ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.