ADVERTISEMENT

ಕೃತಿ ಚೌರ್ಯ: ಪ್ರಾಧ್ಯಾಪಕರಿಂದ ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2015, 19:30 IST
Last Updated 14 ಜೂನ್ 2015, 19:30 IST

ಹೊಸಪೇಟೆ: ವಿದ್ಯಾರ್ಥಿಯೊಬ್ಬರು ಎಂ.ಫಿಲ್‌ ಪದವಿಗಾಗಿ ಸಲ್ಲಿಸಿದ್ದ ಪ್ರಬಂಧದ ಹಲವು ಪುಟಗಳನ್ನು ಪರವಾನಗಿ ಪಡೆಯದೇ ತಮ್ಮ ‘ದಾಸ ಸಾಹಿತ್ಯ ಭಾಷೆ’ ಪುಸ್ತಕದಲ್ಲಿ ಯಥಾವತ್ತಾಗಿ ಬಳಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಡಾ.ಎಸ್‌.ಎಸ್‌. ಅಂಗಡಿ ಕ್ಷಮೆಯಾಚಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.

ಕನ್ನಡ ವಿವಿಯಲ್ಲಿ ಎಂ.ಫಿಲ್‌ ಪದವಿ ಪಡೆದ ಪಿ.ಪ್ರವೀಣ್‌ ಅವರ ಪ್ರಬಂಧದ 124 ರಿಂದ 130ನೇ ಪುಟದ ವರೆಗೆ ಹಾಗೂ 11ನೇ ಅಧ್ಯಾಯದ 167 ರಿಂದ 208ರವರೆಗಿನ ಪುಟಗಳನ್ನು ಬದಲಾವಣೆ ಮಾಡದೇ ಡಾ.ಅಂಗಡಿ ತಮ್ಮ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ಕೃತಿ ಚೌರ್ಯದ ವಿರುದ್ಧ ಪ್ರವೀಣ ಅವರು ಕುಲಪತಿ ಪ್ರೊ ಹಿ.ಚಿ.ಬೋರಲಿಂಗಯ್ಯ ಅವರಿಗೆ ದೂರು ನೀಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಡಾ.ಅಂಗಡಿ ಅವರು ವಿ.ವಿ.ಯ ಕುಲಸಚಿವರಿಗೆ ಕ್ಷಮೆಯಾಚನೆ ಪತ್ರ ಬರೆದಿದ್ದಾರೆ.

‘ನನ್ನ ಕೃತಿಯಲ್ಲಿ ಪ್ರವೀಣ ಅವರ ಪ್ರಬಂಧದ ಕೆಲವು ಪುಟಗಳನ್ನು ಬಳಸಿಕೊಂಡಿರುವುದು ನಿಜ. ಕೃತಿಯಲ್ಲಿ ಅವರ ಹೆಸರು ಹಾಗೂ ಕೃತಿಯ ಹೆಸರನ್ನು ಉಲ್ಲೇಖಿಸಬೇಕಿತ್ತು. ಅಚಾತುರ್ಯದಿಂದ ಈ ಪ್ರಮಾದ ನಡೆದಿದ್ದು, ಅದಕ್ಕಾಗಿ ವಿಷಾದಿಸುತ್ತೇನೆ. ಕೃತಿಯ ಮರು ಮುದ್ರಣದಲ್ಲಿ ಅವರ ಹೆಸರನ್ನು ಉಲ್ಲೇಖಿಸುತ್ತೇನೆ. ಇಂಥ ಪ್ರಮಾದಗಳು ಮುಂದೆ ನಡೆಯದಂತೆ ಎಚ್ಚರ ವಹಿಸುತ್ತೇನೆ. ಅಲ್ಲದೆ ಆಗಿರುವ ಪ್ರಮಾದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಕುಲಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.  

ಏನಿದು ಪ್ರಕರಣ?: ಪ್ರಸ್ತುತ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಪ್ರವೀಣ ಅವರು 2009ರಲ್ಲಿ ಹಂಪಿ ಕನ್ನಡ ವಿ.ವಿ.ಯಲ್ಲಿ ‘ಪುರಂದರಾಸರ ಪ್ರತಿಮಾ ಜಗತ್ತು’ ಪ್ರಬಂಧವನ್ನು ಎಂ.ಫಿಲ್‌ ಪದವಿಗಾಗಿ ಸಲ್ಲಿಸಿದ್ದರು. ಹಿರಿಯ ಸಂಶೋಧಕ ಪ್ರೊ.ಎ.ವಿ. ನಾವಡ ಅವರ ಮಾರ್ಗದರ್ಶನದಲ್ಲಿ ಪ್ರವೀಣ ಅವರಿಗೆ ಅದೇ ವರ್ಷದಲ್ಲಿ ಎಂ.ಫಿಲ್‌ ಪದವಿ ದೊರಕಿತ್ತು.

ಈ ಮಧ್ಯೆ ಡಾ.ಅಂಗಡಿ ಅವರು ‘ದಾಸ ಸಾಹಿತ್ಯ ಭಾಷೆ’ ಕೃತಿ ಹೊರತಂದಿದ್ದು, ಅದರಲ್ಲಿ ಪ್ರವೀಣ ಅವರ ಪ್ರಬಂಧದ ಭಾಗಗಳನ್ನೇ ಯಥಾವತ್ತಾಗಿ ಬಳಸಿಕೊಂಡಿದ್ದಾರೆ. ಸದ್ಯಕ್ಕೆ ಕುಲಪತಿ ಪ್ರೊ ಬೋರಲಿಂಗಯ್ಯ ಅವರು ವಿದೇಶ ಪ್ರವಾಸದಲ್ಲಿರುವುದರಿಂದ ಅವರು ಮರಳಿದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.