ADVERTISEMENT

‘ಕೆಂಪು –ಹಳದಿ ಬಾವುಟವೆ ಇರಲಿ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್   

ಬೆಂಗಳೂರು: ಕರ್ನಾಟಕದ ಭೂಪಟ ಮತ್ತು ಭುವನೇಶ್ವರಿ ಚಿತ್ರ ಒಳಗೊಂಡ ಹಳದಿ–ಕೆಂಪು ಬಾವುಟವನ್ನು ರಾಜ್ಯ ಸರ್ಕಾರ ಅಧಿಕೃತಗೊಳಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.

‘ಸರ್ಕಾರ ಘೋಷಣೆ ಮಾಡಿರುವ ತ್ರಿವರ್ಣ ಧ್ವಜವನ್ನು ನಾವು ಒಪ್ಪುವುದಿಲ್ಲ. ಬಾವುಟದ ಇತಿಹಾಸ ಗೊತ್ತಿಲ್ಲದವರು ಬಿಳಿ ಬಣ್ಣವನ್ನು ಸೇರಿಸಿ ವಿನ್ಯಾಸಗೊಳಿಸಿದ್ದಾರೆ. ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವರಿಕೆಗೆ ಪ್ರಯತ್ನಿಸುತ್ತೇವೆ’ ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಕನ್ನಡ ನಾಡಿಗೆ ಧ್ವಜ ಮಾಡಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ತರಾತುರಿ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಸಭೆಗೆ ಹೋಗಿದ್ದ ಸಾಹಿತಿಗಳು ಮುಖ್ಯಮಂತ್ರಿ ಮಾತು ಕೇಳಿಕೊಂಡು ಬಂದಿದ್ದಾರೆ. ಎಲ್ಲದಕ್ಕೂ ಕೋಲೆ ಬಸವನಂತೆ ತಲೆಯಾಡಿಸುವ ಈ ಸಾಹಿತಿಗಳು ಎಂದೂ ಕನ್ನಡಿಗರ ಪರವಾಗಿ ಬೀದಿಗಿಳಿದಿಲ್ಲ. ಯಾವುದೇ ಪಕ್ಷದ ಮುಖ್ಯಮಂತ್ರಿ ಇದ್ದರೂ ಇವರ ಕೆಲಸ ಇಷ್ಟೆ’ ಎಂದು ಲೇವಡಿ ಮಾಡಿದರು.

ADVERTISEMENT

‘ರಾಜ್ಯಕ್ಕೊಂದು ಬಾವುಟ ಬೇಕು ಎಂಬ ಕಾರಣಕ್ಕೆ ನಾನು ಮತ್ತು ಮ.ರಾಮಮೂರ್ತಿ ಸೇರಿ 1962–63ರಲ್ಲಿ ಹಳದಿ ಬಾವುಟ ತಂದಿದ್ದೆವು. ‌ಬಳಿಕ 1966ರಲ್ಲಿ ಅದಕ್ಕೆ ಕೆಂಪು ಬಣ್ಣವನ್ನು ರಾಮಮೂರ್ತಿಯವರೇ ಸೇರಿಸಿದರು. ನಾವೆಲ್ಲರೂ ಒಪ್ಪಿಕೊಂಡೆವು. 1967ರ ಚುನಾವಣೆಯಲ್ಲಿ ಇದೇ ಬಾವುಟ ಹಿಡಿದು ಚಿಕ್ಕಪೇಟೆಯಿಂದ ಸ್ಪರ್ಧಿಸಿ ಗೆದ್ದು ಬಂದೆ’ ಎಂದು ವಿವರಿಸಿದರು.

‘ಡಾ.ರಾಜಕುಮಾರ್ ಕೂಡ ಇದೇ ಬಾವುಟ ಹಿಡಿದು ಹೋರಾಟ ಮಾಡಿದ್ದಾರೆ. ಈಗ ಕನ್ನಡಿಗರು ಈ ಬಾವುಟದೊಂದಿಗೆ ಭಾವನಾತ್ಮಕ
ವಾಗಿ ಬೆರೆತಿದ್ದಾರೆ. ವಿನ್ಯಾಸ ಸಮಿತಿಯಲ್ಲಿದ್ದವರಿಗೆ ಇದು ಗೊತ್ತಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.