ADVERTISEMENT

ಕೆಆರ್‌ಎಸ್ ಮಗ್ಗುಲಲ್ಲಿ ರೆಸಾರ್ಟ್ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಶ್ರೀರಂಗಪಟ್ಟಣ: ತ್ಲ್ಲಾಲೂಕಿನ ಪ್ರಸಿದ್ಧ ಕೃಷ್ಣರಾಜ ಸಾಗರ ಜಲಾಶಯಕ್ಕೆ ಕೂಗಳತೆ ದೂರದಲ್ಲಿ, ಬೃಂದಾವನಕ್ಕೆ ಹೊಂದಿಕೊಂಡಂತೆ ಖಾಸಗಿ ವ್ಯಕ್ತಿಯೊಬ್ಬರು ರೆಸಾರ್ಟ್ ನಿರ್ಮಿಸಲು ಮುಂದಾಗಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ.

ಬೃಂದಾನಕ್ಕೆ ಕೇವಲ 25 ಮೀಟರ್ ದೂರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿ ಶುರುವಾಗಿದೆ. ಪಾಂಡವಪುರ ತಾಲ್ಲೂಕಿನ ಹೊಸ ಕನ್ನಂಬಾಡಿ ಗ್ರಾಮದ ನಾರಾಯಣ ಎಂಬುವವರಿಗೆ ಸೇರಿದ ಸ.ನಂ.147/1ರ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ.

ನಾರಾಯಣ ಅವರು ತಮ್ಮ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿ ಬೇರೊಬ್ಬರಿಗೆ ಗುತ್ತಿಗೆ ನೀಡಿದ್ದಾರೆ ಎಂದು ಕೆಆರ್‌ಎಸ್ ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ವಿಶ್ವೇಶ್ವರಯ್ಯ ನಾಲೆ ಹಾಗೂ ತೋಟಗಾರಿಕೆ ಇಲಾಖೆ ಮಧ್ಯೆ ಹರಿಯುವ ಹನುಮನಹಳ್ಳಕ್ಕೆ ಹೊಂದಿಕೊಂಡಂತೆ ರೆಸಾರ್ಟ್ ನಿರ್ಮಾಣವಾಗಿದೆ. ಮೂರು ತಿಂಗಳಿನಿಂದ ಕಾಮಗಾರಿ ಭರದಿಂದ ನಡೆಯುತ್ತಿದೆ.

ಆದರೆ `ಹಸಿರು ಪಟ್ಟಿ ವಲಯ~ ಎಂದು ಘೋಷಿತವಾಗಿರುವ ಜಾಗದಲ್ಲಿ ರೆಸಾರ್ಟ್ ನಿರ್ಮಿಸುತ್ತಿರುವುದಕ್ಕೆ ಕೆಆರ್‌ಎಸ್ ಗ್ರಾ.ಪಂ. ಸದಸ್ಯ ಪ್ರಕಾಶ್ ಮತ್ತು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಜಲಾಶಯದ ಭದ್ರತೆ ದೃಷ್ಟಿಯಿಂದ ರೆಸಾರ್ಟ್ ನಿರ್ಮಾಣ ಕಾರ್ಯವನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೃಂದಾವನ ಹಾಗೂ ಜಲಾಶಯದ `ವ್ಯೆ ಪಾಯಿಂಟ್~ ಎಂದು ಹೇಳಲಾಗುವ ಸ್ಥಳದಲ್ಲಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವುದಕ್ಕೆ ಅಧಿಕಾರಿಗಳು ಮೌನ ಸಮ್ಮತಿ ಸೂಚಿಸಿದ್ದಾರೆ ಎಂದು ಟೀಕಿಸಿದ್ದಾರೆ.

`ಕೆಆರ್‌ಎಸ್ ಜಲಾಶಯ ಸಮೀಪವೇ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸುತ್ತಿರುವುದು ನಿಜ. ಕಟ್ಟಡ ನಿರ್ಮಿಸುತ್ತಿರುವವರನ್ನು ಪ್ರಶ್ನಿಸಿದರೆ ಬೃಂದಾವನದ ಒಳಗೆ ಸರ್ಕಾರವೇ ಹೋಟೆಲ್ ಕಟ್ಟಿದೆ. ನಮ್ಮನ್ನು ಏಕೆ ಕೇಳುತ್ತೀರಿ ಎಂದು ಮರು ಪ್ರಶ್ನೆ ಹಾಕುತ್ತಾರೆ.


ಇಷ್ಟಕ್ಕೂ ಕಟ್ಟಡ ನಿರ್ಮಿಸಲು ಪರವಾನಗಿ ಕೊಡುವವರು ಕಂದಾಯ ಅಧಿಕಾರಿಗಳೇ ಹೊರತು ನಾವಲ್ಲ~ ಎಂದು ಕಾವೇರಿ ನೀರಾವರಿ ನಿಗಮದ ಇಇ ವಿಜಯಕುಮಾರ್ ಹೇಳುತ್ತಾರೆ.

`ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಕಟ್ಟಡ ನಿರ್ಮಿಸಲು ಅಲಿನಿಯೇಶನ್ ಕೊಡುವವರು ತಹಶೀಲ್ದಾರ್. ಹಾಗಾಗಿ ನನಗೆ ಆ ಬಗ್ಗೆ ಮಾಹಿತಿ ಇಲ್ಲ~ ಎನ್ನುವುದು ಪಾಂಡವಪುರ ಉಪ ವಿಭಾಗಾಧಿಕಾರಿ ಜಿ.ಪ್ರಭು ಅವರ ವಿವರಣೆ.
 
`ಕೆಆರ್‌ಎಸ್‌ನ ಬೃಂದಾವನ ಬಳಿ ವಾಣಿಜ್ಯ ಕಟ್ಟಡ ನಿರ್ಮಿಸಲು ಎರಡು ವರ್ಷಗಳ ಹಿಂದೆಯೇ ಅನುಮತಿ ನೀಡಲಾಗಿದೆ. ಯಾವ ಆಧಾರದ ಮೇಲೆ ಅನುಮತಿ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಒಂದೆರಡು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸುತ್ತೇನೆ~ ಎಂದು ಪಾಂಡವಪುರ ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ ಹೇಳಿದ್ದಾರೆ.

ಬೃಂದಾವನ ಬಳಿ ಸಣ್ಣ ವ್ಯಾಪಾರಿಗಳು ಕೈಗಾಡಿ, ಪಾರ್ಲರ್ ಇಟ್ಟುಕೊಳ್ಳಲು ಆಕ್ಷೇಪಿಸುವ ಕಾವೇರಿ ನೀರಾವರಿ ನಿಗಮ 1.20 ಎಕರೆ ವಿಸ್ತೀರ್ಣದಲ್ಲಿ ರೆಸಾರ್ಟ್ ನಿಮಿಸುತ್ತಿದ್ದರೂ ಚಕಾರ ಎತ್ತದೇ ಇರುವುದು ಹಾಗೂ ಕಂದಾಯ ಅಧಿಕಾರಿಗಳ ಹಾರಿಕೆ ಉತ್ತರ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.

ಉದ್ದೇಶಿತ ಕಟ್ಟಡ ನಿರ್ಮಾಣವಾದರೆ ಜಲಾಶಯ ಮತ್ತು ಬೃಂದಾನ ನೋಡಲು ಪ್ರವಾಸಿಗರು ತ್ರಾಸ ಪಡಬೇಕಾಗುತ್ತದೆ. ಅಲ್ಲದೆ ಭದ್ರತೆ ದೃಷ್ಟಿಯಿಂದ ರೆಸಾರ್ಟ್ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಬೇಕು ಎಂದು ಕೆಆರ್‌ಎಸ್ ಗ್ರಾ.ಪಂ.ನ ಜನಪ್ರತಿನಿಧಿಗಳು ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT