ADVERTISEMENT

ಕೆಎಲ್‌ಇ ಸಂಶೋಧನೆ: ಅಮೆರಿಕ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 19:30 IST
Last Updated 9 ಜೂನ್ 2012, 19:30 IST
ಕೆಎಲ್‌ಇ ಸಂಶೋಧನೆ: ಅಮೆರಿಕ ಶ್ಲಾಘನೆ
ಕೆಎಲ್‌ಇ ಸಂಶೋಧನೆ: ಅಮೆರಿಕ ಶ್ಲಾಘನೆ   

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಕೆಎಲ್‌ಇ ಡೀಮ್ಡ ವಿವಿ ಕಾರ್ಯವನ್ನು ಅಮೆರಿಕ ಆರೋಗ್ಯ ಕಾರ್ಯದರ್ಶಿ ಕ್ಯಾಥ್ಲೀನ್ ಸೆಬೆಲಿಯಸ್ ಶ್ಲಾಘಿಸಿದರು.
ವಾಷಿಂಗ್ಟನ್‌ನಲ್ಲಿ ಈಚೆಗೆ ನಡೆದ ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಜಾಗತಿಕ ಜಾಲದ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಕ್ಯಾಥ್ಲೀನ್, ಬೆಳಗಾವಿ ಜಿಲ್ಲೆಯಲ್ಲಿ ನವಜಾತ ಶಿಶುಗಳ ಸಂರಕ್ಷಣೆ ಹಾಗೂ ಪೋಷಣೆಯಲ್ಲಿ ಜೆ.ಎನ್.ಎಂ.ಸಿ. ವೈದ್ಯಕೀಯ ಸಂಶೋಧನಾ ಘಟಕ ಉತ್ತಮ ಸಾಧನೆ ಮಾಡಿದೆ. ಆ ಸಂಸ್ಥೆಗೆ ಐದು ವರ್ಷಗಳ ಕಾಲ  ಅನುದಾನ  ಒದಗಿಸಲು ನಿರ್ಧರಿಸಿರುವುದಾಗಿ ಅವರು ಪ್ರಕಟಿಸಿದರು.

ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸಂಶೋಧನಾ ತಂಡ ಸಮುದಾಯ ಆಧಾರಿತ ಸಂಶೋಧನೆಯನ್ನು ಕೈಗೊಂಡಿದೆ. ಸಂಶೋಧನೆ ಮಾಡಿದ ಮಿಸೋಪ್ರೊಸ್ಟಾಲ್ ಔಷಧವನ್ನು ಬಳಸುವುದರಿಂದ ಪ್ರಸೂತಿಯ ನಂತರದ ರಕ್ತಸ್ರಾವವನ್ನು ತಡೆಗಟ್ಟಬಹುದೆಂದು ತಂಡ ತೋರಿಸಿದೆ.

ಈ ಔಷಧವನ್ನು ದೇಶದಾದ್ಯಂತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಳಸಿಕೊಳ್ಳಲು ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಮಾನ್ಯತೆ ನೀಡಿದೆ. ಏಷ್ಯಾ ಹಾಗೂ ಆಫ್ರಿಕಾದ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಔಷಧ ಬಳಕೆಯಾಗುತ್ತಿದೆ. ಜೆ.ಎನ್.ಎಂ.ಸಿ. ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ. ಬಿ.ಎಸ್ ಕೋಡಕನಿ, ಡಾ.ಶಿವಪ್ರಸಾದ ಎಸ್. ಗೌಡರ ಹಾಗೂ ಡಾ. ಎನ್.ಎಸ್.ಮಹಾಂತಶೆಟ್ಟಿ ಈ ಕಾರ್ಯದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ~ ಎಂದರು.

ಡಾ. ಪ್ರಭಾಕರ ಕೋರೆ ಮಾತನಾಡಿ, ಕೆ.ಎಲ್.ಇ ಸಂಸ್ಥೆ ಅಮೆರಿಕದ ಸಂಶೋಧನಾ ಕ್ಷೇತ್ರದ ಸಹಭಾಗಿತ್ವದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಾಪುರದಲ್ಲಿ ವಿವಿಧ ಯೋಜನೆ ಅನುಷ್ಠಾನಗೊಳಿಸಿದೆ  ಎಂದರು. ದಕ್ಷಿಣ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕದ ಸಂಶೋಧಕರು, ಅಮೆರಿಕ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.