ADVERTISEMENT

ಕೆಪಿಎಸ್‌ಸಿ: ಸಿಐಡಿ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು: 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಸೇರಿದಂತೆ ಎಂಟು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಸಿಐಡಿ ಪೊಲೀಸರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ 2011ನೇ ಸಾಲಿನ ‘ಎ’ ಮತ್ತು ‘ಬಿ’ ಗುಂಪಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ  ಕುರಿತು ಸಿಐಡಿ ಪೊಲೀಸರು ತನಿಖೆ ನಡೆಸಿದ್ದರು. ತನಿಖೆಯ ಅಂತಿಮ ವರದಿ ಮತ್ತು ಆರೋಪಪಟ್ಟಿಯ ಕರಡನ್ನು ಸಿಐಡಿ ಪೊಲೀಸರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌ ಅವರಿಗೆ ಬುಧವಾರ ಸಲ್ಲಿಸಿದ್ದಾರೆ.

ಗೋನಾಳ ಭೀಮಪ್ಪ, ಆಯೋಗದ ಹಾಲಿ ಸದಸ್ಯೆ ಡಾ.ಮಂಗಳಾ ಶ್ರೀಧರ್‌, ಕಾರ್ಯದರ್ಶಿ ಹುದ್ದೆಯಲ್ಲಿದ್ದ ಕೆ.ಆರ್‌.ಸುಂದರ್, ಪೀಠಾಧಿಕಾರಿ­ಯಾಗಿದ್ದ ಅರುಣಾಚಲಂ, ಮಂಗಳಾ ಅವರ ಆಪ್ತ ಸಹಾಯಕರಾಗಿದ್ದ ಅಶೋಕ್‌ಕುಮಾರ್‌, ಬೆಂಗಳೂರು ಜಲಮಂಡಳಿ ಎಂಜಿನಿಯರ್‌ ಸುಧೀರ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ ಸೋಮೇಶ್‌ ಚಿಕ್ಕಮಠ ಮತ್ತು ರಾಜ್ಯ ಸರ್ಕಾರದ ಸಚಿವಾಲ­ಯದ ನೌಕರ ರಾಜಶೇಖರ್‌ ಅವ್ಯವಹಾರದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.

ಈ ಎಲ್ಲರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಸಿಐಡಿ ಪೊಲೀಸರು ಕೋರಿದ್ದಾರೆ ಎಂದು ಮೂಲ­ಗಳು ತಿಳಿಸಿವೆ.

362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕೆಪಿ­ಎಸ್‌ಸಿ ನಡೆಸಿದ ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಮುಖ್ಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರಿಂದ ಲಂಚ ಪಡೆದು ಅವರಿಗೆ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡ­ಲಾಗಿತ್ತು ಎಂದು ಕೆಲ ಅಭ್ಯರ್ಥಿಗಳು ಬಹಿರಂಗವಾಗಿಯೇ ಆರೋಪ ಮಾಡಿದ್ದರು.

ಪ್ರಕರಣ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದ ರಾಜ್ಯ ಸರ್ಕಾರ, ಸಿಐಡಿ ತನಿಖೆಗೆ ಆದೇಶಿಸುವ ನಿರ್ಧಾರಕ್ಕೆ ಬಂದಿತ್ತು. ಅದರಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳು ಗೋನಾಳ ಭೀಮಪ್ಪ, ಮಂಗಳಾ ಶ್ರೀಧರ್‌ ಸೇರಿದಂತೆ ಎಂಟು ಮಂದಿ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್‌ ದಾಖಲಿಸಿದ ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು.

ಬಿಪಿನ್‌ ಗೋಪಾಲಕೃಷ್ಣ ಮಾರ್ಗದರ್ಶನ: ಸಿಐಡಿ ಡಿಜಿಪಿ ಬಿಪಿನ್‌ ಗೋಪಾಲಕೃಷ್ಣ ಅವರ ಮಾರ್ಗದ­ರ್ಶನ­ದಲ್ಲಿ  ತನಿಖೆ ನಡೆದಿತ್ತು. ಡಿಐಜಿ ಸೌಮೇಂದು ಮುಖರ್ಜಿ ಅವರು ತನಿಖೆಯ ನೇತೃತ್ವ ವಹಿಸಿದ್ದು, ಡಿವೈಎಸ್‌ಪಿ ಸಿ.ಎ.ಸೈಮನ್‌ ತನಿಖಾ­ಧಿ­ಕಾರಿಯಾಗಿ ಕಾರ್ಯನಿರ್ವ­ಹಿಸಿದ್ದರು. 185 ಪುಟಗಳ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ತಂಡ,  ನೇಮಕ ಪ್ರಕ್ರಿಯೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ.

ಲಿಖಿತ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದಿದ್ದ ತಮಗೆ ಉದ್ದೇಶ­­ಪೂರ್ವಕವಾಗಿ ಕಡಿಮೆ ಅಂಕ ನೀಡಲಾಗಿದೆ ಎಂದು ಹಲವು ಅಭ್ಯರ್ಥಿಗಳು ಆರೋಪಿಸಿದ್ದರು. ಆಯೋಗದ ಸದಸ್ಯೆ ಮಂಗಳಾ ಶ್ರೀಧರ್‌  ರೂ 70 ಲಕ್ಷ  ಲಂಚ ಕೇಳಿದ್ದರು ಎಂದು ಅಭ್ಯರ್ಥಿ ಡಾ.ಎಚ್‌.ಪಿ.ಎಸ್‌.ಮೈತ್ರಿ ಬಹಿರಂಗವಾಗಿಯೇ ಆರೋಪಿಸಿದ್ದರು. ಈ ಎಲ್ಲಾ ಆರೋಪಗಳು ನಿಜ ಎಂಬುದು ತನಿಖೆ ವೇಳೆ ದೃಢಪಟ್ಟಿದೆ ಎಂಬುದಾಗಿ ಸಿಐಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಶೀಘ್ರ ಅನುಮತಿ ಸಾಧ್ಯತೆ: ಮುಖ್ಯ ಕಾರ್ಯದರ್ಶಿ­ಯವರು ಸಿಐಡಿ ವರದಿ ಪರಿಶೀಲಿ­ಸುತ್ತಿದ್ದಾರೆ. ಚೀನಾ ಪ್ರವಾಸ­ದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಪಸಾದ ತಕ್ಷಣವೇ ಅವರೊಂದಿಗೆ ಚರ್ಚೆ ನಡೆಸಿ, ಕೆಪಿಎಸ್‌ಸಿ ಹಗರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಎಂಟು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.