ADVERTISEMENT

ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ: ಲಾಠಿ ಪ್ರಹಾರ

ಕಾಂಗ್ರೆಸ್ ಕಚೇರಿ ಎದುರು ಪರ- ವಿರೋಧ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST
ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಎದುರು ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಮುಖಂಡ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದರು.  -ಪ್ರಜಾವಾಣಿ ಚಿತ್ರ
ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಎದುರು ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಮುಖಂಡ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಗುರುವಾರ ಐದು ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತರ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಿದರು.

ಈವರೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಆಧರಿಸಿ ಪ್ರತಿಭಟನೆಗಳು ಹೆಚ್ಚುತ್ತಿವೆ. ಸೋಮವಾರ ದೆಹಲಿಯಲ್ಲಿ ಕಾಣಿಸಿಕೊಂಡ ಪ್ರತಿಭಟನೆಯ ಕಾವು ಮಂಗಳವಾರದ ವೇಳೆಗೆ ಬೆಂಗಳೂರಿಗೆ ಸ್ಥಳಾಂತರವಾಗಿತ್ತು. ಬುಧವಾರ ಎರಡು ಬಣಗಳು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವು. ಗುರುವಾರ ಈ ಸಂಖ್ಯೆ ಐದಕ್ಕೇರಿದೆ.

ಗುರುವಾರ ಬೆಳಿಗ್ಗೆಯೇ ಕೆಪಿಸಿಸಿ ಕಚೇರಿ ಎದುರು ಜಮಾಯಿಸಿದ ದಾಸರಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರಿಗೆ ತಮ್ಮ ಕ್ಷೇತ್ರದಲ್ಲಿ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿತು. ಸ್ಥಳೀಯ ಮುಖಂಡ ಕೆ.ಸಿ.ಅಶೋಕ್ ಅವರಿಗೇ ಟಿಕೆಟ್ ನೀಡುವಂತೆ ಆಗ್ರಹಿಸಿ ಘೋಷಣೆ ಕೂಗಿತು.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಎ.ಸಿ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡದಂತೆ ಮತ್ತೊಂದು ಗುಂಪು ಪ್ರತಿಭಟನೆ ನಡೆಸಿತು. ಸ್ಥಳೀಯ ಮುಖಂಡರಾದ ನಲ್ಲೂರು ನಾಗೇಶ್, ಮುನಿಸ್ವಾಮಿ ಮತ್ತು ರಾಜಣ್ಣ ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರು ಕೆಪಿಸಿಸಿ ಕಚೇರಿ ಒಳಕ್ಕೆ ಪ್ರವೇಶಿಸಲು ಯತ್ನಿಸಿದಾಗ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು, ಐಅವರನ್ನು ನಿಯಂತ್ರಿಸಿದರು. ಇದೇ ಗುಂಪಿನಲ್ಲಿದ್ದ ವೇಲು ಎಂಬುವರು ಮೃತಪಟ್ಟಿದ್ದಾರೆ.

ತುರುವೇಕೆರೆ ಕಾಂಗ್ರೆಸ್ ಮುಖಂಡ ಚೌಧರಿ ರಂಗಪ್ಪ ನೇತೃತ್ವದಲ್ಲಿ ಧರಣಿ ನಡೆಸಿದ ಮತ್ತೊಂದು ಗುಂಪು, ತಮ್ಮ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿತು. ಹೊರಗಿನಿಂದ ಬಂದವರಿಗೆ ಟಿಕೆಟ್ ಹಂಚಿಕೆ ಮಾಡುವುದಕ್ಕೆ ತಮ್ಮ ವಿರೋಧವಿದೆ ಎಂದು ಘೋಷಣೆಗಳನ್ನು ಕೂಗಿತು. 2008ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಯೀದ್ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮತ್ತೊಂದು ಗುಂಪು, ಅಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಅವರನ್ನು ಕಣಕ್ಕಿಳಿಸುವುದನ್ನು ವಿರೋಧಿಸಿತು.

ಹಿರಿಯೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಇನ್ನೊಂದು ಗುಂಪು ಪ್ರತಿಭಟನೆ ನಡೆಸಿತು. ಪಕ್ಷೇತರ ಶಾಸಕ ಡಿ.ಸುಧಾಕರ್ ಅವರಿಗೆ ಟಿಕೆಟ್ ನೀಡುವುದಕ್ಕೆ ಈ ಗುಂಪು ವಿರೋಧ ವ್ಯಕ್ತಪಡಿಸಿತು. `ಕಳೆದ ಚುನಾವಣೆಯಲ್ಲಿ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಬ್ಯಾಂಕ್‌ಗೆ ವಂಚಿಸಿದ ಆರೋಪದ ಮೇಲೆ ಅವರ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆಯುತ್ತಿದೆ. ಅಂತಹವರಿಗೆ ಟಿಕೆಟ್ ನೀಡುವುದು ಬೇಡ' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಠಾಧೀಶರ ಪ್ರವೇಶ: ಕುಣಿಗಲ್‌ನ ಅರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಲವರು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರನ್ನೇ ಕಣಕ್ಕಿಳಿಸುವಂತೆ ಒತ್ತಾಯಿಸಿತು. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಇರುವುದು ಹಾಗೂ ಮಾಗಡಿ ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಹೈಕಮಾಂಡ್ ಕೆಂಡಾಮಂಡಲ
ಪ್ರತಿಭಟನೆಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ಗುರುವಾರ ಸಂಜೆ ಕೆಪಿಸಿಸಿ ಪ್ರಮುಖರಿಗೆ ಸಂದೇಶವೊಂದನ್ನು ರವಾನಿಸಿರುವ ಕಾಂಗ್ರೆಸ್ ಹೈಕಮಾಂಡ್, `ಪ್ರತಿಭಟನೆ ನಡೆಸುವವರ ಅರ್ಜಿಗಳನ್ನು ಪರಿಗಣಿಸುವುದು ಬೇಡ' ಎಂಬ ಸ್ಪಷ್ಟ ಸೂಚನೆ ನೀಡಿದೆ. ಪ್ರತಿಭಟನೆ ನೇತೃತ್ವ ವಹಿಸಿರುವವರ ತಕ್ಷಣವೇ ದೆಹಲಿಗೆ ಕಳುಹಿಸುವಂತೆಯೂ ಸೂಚಿಸಿದೆ.

`ಪ್ರತಿಭಟನೆ ನಡೆಸುವ ಮುಖಂಡರು ಟಿಕೆಟ್ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಪ್ರತಿಭಟನೆ, ಧರಣಿ ನಡೆಸುವ ಮುಖಂಡರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆಯೂ ಸೂಚಿಸಿ' ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಮತ್ತಿಕಟ್ಟಿ ಅಸಮಾಧಾನ
ಪ್ರತಿಭಟನೆ ಹೆಚ್ಚುತ್ತಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, `ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಿಸ್ತಿನಿಂದ ವರ್ತಿಸಬೇಕು. ಟಿಕೆಟ್‌ಗಾಗಿ ಜನರನ್ನು ಕರೆತಂದು ಪ್ರತಿಭಟನೆ ನಡೆಸುವುದು ಸರಿಯಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟಿಕೆಟ್ ಹಂಚಿಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ಇದ್ದರೆ ಕೆಲವು ಜನರು ಹೋಗಿ ಪಕ್ಷದ ನಾಯಕರನ್ನು ಭೇಟಿಯಾಗಿ ಅಹವಾಲು ಸಲ್ಲಿಸಬಹುದು.
ಆದರೆ, ಒತ್ತಡ ಹೇರುವ ಉದ್ದೇಶದಿಂದ ಕಾರ್ಯಕರ್ತರನ್ನು ದುರುಪಯೋಗ ಮಾಡಿಕೊಳ್ಳುವುದು ಸಲ್ಲ. ಯಾರೂ ಇಂತಹ ಮಾರ್ಗ ಅನುಸರಿಸಬಾರದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.