ADVERTISEMENT

ಕೇಂದ್ರದ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ

ಅಡಿಕೆ, ತೆಂಗು, ಕೊಬ್ಬರಿ ಬೆಲೆ ಕುಸಿತ ಸಮಸ್ಯೆ ಚರ್ಚಿಸಲು ನಡೆದ ಸಭೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
ಕೇಂದ್ರದ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ
ಕೇಂದ್ರದ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ   

ಬೆಂಗಳೂರು:  ತೆಂಗು, ಅಡಿಕೆ ಹಾಗೂ ಕೊಬ್ಬರಿ ದರ ಕುಸಿತ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕೈಗೊಳ್ಳುವ ಕ್ರಮಗಳನ್ನು ಆಧರಿಸಿ ಮುಂದಿನ ಹೆಜ್ಜೆ ಇಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಯಿತು.

ದರ ಕುಸಿತದಿಂದ ಕಂಗಾಲಾಗಿರುವ ಅಡಿಕೆ, ತೆಂಗು ಬೆಳೆಗಾರರು ಪ್ರತಿಭಟನೆ ಹಾದಿ ಹಿಡಿದಿರುವುದರಿಂದ ಸಮಸ್ಯೆಗೆ ತುರ್ತು ಪರಿಹಾರ ಕಂಡುಹಿಡಿಯಲು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಕರೆಯಲಾಗಿತ್ತು.

‘ನಾಳೆ (ಬುಧವಾರ) ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ  ಸಮಸ್ಯೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಅನಂತಕುಮಾರ್‌  ಭರವಸೆ ನೀಡಿದರು.

‘ಕೇಂದ್ರ ಸಂಪುಟದ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ ಇಡುವ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು’ ಎಂದು ಸಭೆ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಮಾಧ್ಯಮದ ಪ್ರತಿನಿಧಿಗಳಿಗೆ  ತಿಳಿಸಿದರು.

‘ಬೆಲೆ ಕುಸಿತದ ತಡೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಹಾಗೂ ವಾಣಿಜ್ಯ ಸಚಿವರು ಮಧ್ಯ ಪ್ರವೇಶಿಸುವಂತೆ ಕೇಳುತ್ತೇನೆ. ಅವರಿಂದ ಬರುವ ಪ್ರತಿಕ್ರಿಯೆ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಬಹುದು’ ಎಂದು ಅನಂತಕುಮಾರ್‌ ಹೇಳಿದರು’ ಎಂದು ಜಯಚಂದ್ರ ವಿವರಿಸಿದರು.

ಕ್ವಿಂಟಲ್‌ ಕೊಬ್ಬರಿಗೆ ₹10,827 ನಿಗದಿ ಮಾಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರ ಈ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ಗೆ ₹6,240 ನಿಗದಿ ಮಾಡಿದೆ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಜಯಚಂದ್ರ ಹೇಳಿದರು.

ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು.  ರೈತರಿಗೆ ಬೋನಸ್‌ ಕೊಡುವ ಮೂಲಕ   ರಾಜ್ಯ ಸರ್ಕಾರವೂ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಸಚಿವರು ವಿವರಿಸಿದರು.

ಪ್ರಧಾನಿ ಬಳಿಗೆ ನಿಯೋಗ
ತೆಂಗು ಹಾಗೂ ಅಡಿಕೆ ಬೆಲೆ ಸಮಸ್ಯೆ ಕುರಿತು ಕೇಂದ್ರದ ನಿಲುವೇನು ಎಂದು ಗಮನಿಸಿದ ಬಳಿಕ ಪ್ರಧಾನಿ ಬಳಿಗೆ ನಿಯೋಗ ಒಯ್ಯುವ ಕುರಿತು ತೀರ್ಮಾನ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ತೀರ್ಮಾನ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಿ  ಮುಂದಿನ ಹೋರಾಟ ರೂಪಿಸುತ್ತೇವೆ ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನುಡಿದರು.

ADVERTISEMENT

*
ಕ್ವಿಂಟಲ್‌ ಕೊಬ್ಬರಿಗೆ ₹10,827 ನಿಗದಿ ಮಾಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ಗೆ ₹6,240 ನಿಗದಿ ಮಾಡಿದೆ
-ಟಿ.ಬಿ. ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.