ADVERTISEMENT

ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಬೆಂಗಳೂರು: ಬೆಂಗಳೂರಿನಲ್ಲಿರುವ ಸಾಲ ವಸೂಲಾತಿ ನ್ಯಾಯಮಂಡಳಿಯಲ್ಲಿ ವಾರದಲ್ಲಿ ಮೂರು ದಿನ ಕಡ್ಡಾಯವಾಗಿ ಕಲಾಪ ನಡೆಸುವಂತೆ ಸೋಮವಾರ ಆದೇಶಿಸಿರುವ ಹೈಕೋರ್ಟ್, ನ್ಯಾಯಾಧೀಶರ ನೇಮಕಾತಿ ಕುರಿತು ಸಮರ್ಪಕ ಮಾಹಿತಿ ಒದಗಿಸಲು ವಿಫಲವಾದ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮಂಡಳಿಯಲ್ಲಿ ನ್ಯಾಯಾಧೀಶರೇ ಇಲ್ಲದೇ ಸಮಸ್ಯೆ ಉಂಟಾಗಿರುವ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ಎ.ಎಸ್.ಪಾಚ್ಚಾಪುರೆ ಅವರಿದ್ದ ವಿಭಾಗೀಯ ಪೀಠ, ವಾರದಲ್ಲಿ ಕನಿಷ್ಠ ಮೂರು ದಿನ ಕಲಾಪ ನಡೆಸಲೇಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿತು.

ಈವರೆಗೂ ನ್ಯಾಯಮಂಡಳಿಗೆ ನ್ಯಾಯಾಧೀಶರನ್ನು ನೇಮಿಸದಿರುವ ಕುರಿತು ವಿಚಾರಣೆ ಆರಂಭಿಸಿದ ನ್ಯಾಯಪೀಠ, ಇತರೆ ರಾಜ್ಯಗಳಲ್ಲಿ ಇರುವ ನ್ಯಾಯಮಂಡಳಿಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರದ ವಕೀಲರನ್ನು ಕೇಳಿತು. ಮೊದಲು ಚೆನ್ನೈ ನ್ಯಾಯಮಂಡಳಿಯ ವಿವರ ಕೋರಿತು.

‘ಚೆನ್ನೈನಲ್ಲಿ ಮೂವರು ನ್ಯಾಯಾಧೀಶರಿದ್ದಾರೆ. ಅವರಲ್ಲಿ ಒಬ್ಬರು ಫೆಬ್ರುವರಿಯಲ್ಲಿ ಮತ್ತೊಬ್ಬರು ಏಪ್ರಿಲ್‌ನಲ್ಲಿ ನಿವೃತ್ತರಾಗುತ್ತಿದ್ದಾರೆ’ ಎಂದು ವಕೀಲರು ತಿಳಿಸಿದರು. ಆಗ ನ್ಯಾ.ಕೇಹರ್, ಕೇರಳ, ಹೈದರಾಬಾದ್ ಮತ್ತು ಮಹಾರಾಷ್ಟ್ರ ನ್ಯಾಯಮಂಡಳಿಗಳಲ್ಲಿ ಇರುವ ನ್ಯಾಯಾಧೀಶರ ಸಂಖ್ಯೆ ಕುರಿತು ಪ್ರಶ್ನಿಸಿದರು.

‘ಕೇರಳ ಮತ್ತು ಹೈದರಾಬಾದ್‌ನಲ್ಲಿ ತಲಾ ಒಬ್ಬರು ನ್ಯಾಯಾಧೀಶರಿದ್ದಾರೆ’ ಎಂದ ವಕೀಲರು, ಮಹಾರಾಷ್ಟ್ರ ನ್ಯಾಯಮಂಡಳಿ ಮಾಹಿತಿ ತಿಳಿದಿಲ್ಲ ಎಂದು ಉತ್ತರಿಸಿದರು. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಯವರು, ‘ಇದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರುತ್ತದೆ’ ಎಂದು ತರಾಟೆಗೆ ತೆಗೆದುಕೊಂಡರು.

ನಾಚಿಕೆಗೇಡಿನ ಸಂಗತಿ: ‘ಕೇಂದ್ರ ಸರ್ಕಾರ ಹೀಗೆ ಹೇಳಬಾರದು. ನ್ಯಾಯಮಂಡಳಿಯ ಸಮಸ್ಯೆಯ ಬಗ್ಗೆ ನ್ಯಾಯಾಲಯವೇ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ನ್ಯಾಯಾಲಯವೇ ಮಾಹಿತಿ ಬಯಸಿದರೆ ಇಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.