ADVERTISEMENT

ಕೇದಾರನಾಥ: ಮದ್ದೂರಿನ ನಾಲ್ವರಿಗೆ ಆಶ್ರಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಮದ್ದೂರು:  ಪಟ್ಟಣದಿಂದ ಉತ್ತರ ಭಾರತದ ಕೇದಾರನಾಥಕ್ಕೆ ತೆರಳಿ ಜಲಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ 16 ಮಂದಿಯಲ್ಲಿ ನಾಲ್ವರು ಪತ್ತೆಯಾಗಿದ್ದಾರೆ.

ಪಟ್ಟಣದ ಕೋಟೆ ಬೀದಿಯ ನಿವಾಸಿ ಎಂ.ಜಿ. ನಾಗರಾಜ ರಾವ್ ಅವರ ಪುತ್ರ ಅನಂತ, ಸೊಸೆ ಕೃತಿ, ತಂಗಿಯ ಮಗಳು ನವ್ಯಾ, ಅಳಿಯ ರವಿಚಂದ್ರ ಸುರಕ್ಷಿತವಾಗಿದ್ದು, ಇವರೆಲ್ಲರೂ ಕೇದಾರನಾಥದ ಮತ್ತೊಂದು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ನಾಗರಾಜ್‌ರಾವ್ ಸೇರಿದಂತೆ ಉಳಿದ 12 ಮಂದಿ ಎಲ್ಲಿದ್ದಾರೆ ಎಂಬ ಸುಳಿವು ಪತ್ತೆಯಾಗಿಲ್ಲ.

ಪತ್ರಕರ್ತ ಎಂ.ಜಿ. ಸೀತಾರಾಮು ಅವರ ಕಿರಿಯ ಪುತ್ರ ರಾಘವೇಂದ್ರ ಗುರುವಾರ ತಮ್ಮ ತಂದೆಯವರನ್ನು ಕರೆ ತರಲು ಕೇದಾರನಾಥಕ್ಕೆ ಹೋಗುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದ್ದರು. ಆದರೆ, ಕೇದಾರನಾಥ, ಬದರಿನಾಥ ಸೇರಿದಂತೆ ಪ್ರವಾಹಕ್ಕೆ ಒಳಗಾದ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿರುವ ಕಾರಣ ರಕ್ಷಣೆಯಾದ ಎಲ್ಲಾ ಯಾತ್ರಿಗಳನ್ನು ಅವರ ಸ್ಥಳಗಳಿಗೆ  ತಲುಪಿಸಲು ವ್ಯವಸ್ಥೆ ಮಾಡುವುದಾಗಿ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು ಸೂಚನೆ ನೀಡಿದ ಮೇರೆಗೆ ಅವರು ಬೆಂಗಳೂರಿನಲ್ಲಿಯೇ ಉಳಿದಿದ್ದಾರೆ.

ವೈದ್ಯ ಕುಟುಂಬ ಸುರಕ್ಷಿತ
ಮುನವಳ್ಳಿ (ಬೆಳಗಾವಿ ಜಿಲ್ಲೆ): 
ಉತ್ತರ ಭಾರತ ಪ್ರವಾಸಕ್ಕೆ ಹೋಗಿರುವ ಇಲ್ಲಿಯ ವೈದ್ಯ ಸುನೀಲ್ ಪೇಟಕರ ಕುಟುಂಬ ಸಂಕಷ್ಟದಿಂದ ಪಾರಾಗಿ ಸುರಕ್ಷಿತ ಸ್ಥಳಕ್ಕೆ ತಲುಪಿದೆ ಎಂದು ತಿಳಿಸಲಾಗಿದೆ.

ಡಾ.ಸುನೀಲ್ ಪೇಟಕರ, ಅವರ ಪತ್ನಿ ಶ್ರದ್ಧಾ, ತಾಯಿ  ಸೀತಾಬಾಯಿ, ಸಹೋದರ ಶ್ರೀಕಾಂತ  ಹಾಗೂ ಅವರ ಪತ್ನಿ ಸ್ಮಿತಾ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು.ಇವರೆಲ್ಲರೂ ಶುಕ್ರವಾರ ಹರಿದ್ವಾರದಿಂದ ಸುರಕ್ಷಿತವಾಗಿ ಪ್ರಯಾಣ ಬೆಳೆಸಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.