ADVERTISEMENT

ಕೇರಳದತ್ತ ನಂದಿನಿ ಹಾಲು?

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಮಂಗಳೂರು: ಕೇರಳದಲ್ಲಿ `ಮಿಲ್ಮಾ~ ಹಾಲಿನ ಬೆಲೆ ಲೀಟರ್‌ಗೆ 5 ರೂಪಾಯಿ ಏರಿಕೆಯಾಗಿರುವಂತೆಯೇ ಅದರ ನೇರ ಪರಿಣಾಮ ಮಂಗಳೂರಿನಲ್ಲಾಗಿದೆ. ಲೀಟರ್‌ಗೆ 25 ರೂಪಾಯಿ ಬೆಲೆಯ ಟೋನ್ಡ್ ಹಾಲಿನ ಕೊರತೆ ನಗರದಲ್ಲಿ ಕಂಡುಬಂದಿದೆ.

ಲೀಟರ್‌ಗೆ 25 ರೂಪಾಯಿಯ ಟೋನ್ಡ್ ಹಾಲು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತದೆ. 28 ರೂಪಾಯಿಯ ಹಸಿರು ಪ್ಯಾಕೆಟ್‌ನ ದನದ ಹಾಲು ಹಾಗೂ 30 ರೂಪಾಯಿಯ ಶುಭಂ ಹಾಲು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಕೇರಳದಲ್ಲಿ ಮಿಲ್ಮಾ ಹಾಲಿನ ದರ ಹೆಚ್ಚುತ್ತಿದ್ದಂತೆಯೇ ಏಕಾಏಕಿಯಾಗಿ ಮಂಗಳೂರಿನಲ್ಲಿ ಕನಿಷ್ಠ ದರದ ಟೋನ್ಡ್‌ಹಾಲಿನ ಪೂರೈಕೆ ಇಳಿಮುಖವಾಗಿರುವುದು ಕಂಡುಬಂದಿದೆ.

`ಸಾಮಾನ್ಯವಾಗಿ ನಮ್ಮಲ್ಲಿಗೆ ನಿತ್ಯ ಬೆಳಿಗ್ಗೆ 70 ಕ್ರೇಟ್ ಟೋನ್ಡ್ ಹಾಲು ಬರುತ್ತಿತ್ತು. 8 ಕ್ರೇಟ್‌ನಷ್ಟು ಕೌ ಮಿಲ್ಕ್ ಬರುತ್ತಿತ್ತು. ಆದರೆ ಇಂದು ಟೋನ್ಡ್ ಹಾಲಿನ ಕ್ರೇಟ್‌ಗಳು 10ರಷ್ಟು ಕಡಿಮೆಯಾಗಿವೆ, ಬದಲಿಗೆ 5 ಹೆಚ್ಚುವರಿ ಕೌ ಮಿಲ್ಕ್‌ನ ಕ್ರೇಟ್‌ಗಳನ್ನು ಕಳುಹಿಸಿದ್ದಾರೆ. ನನ್ನಂತೆ ಹಲವು ಹಾಲು ವಿತರಕರು ಇಂತಹ ಸಮಸ್ಯೆ ಎದುರಿಸಿದ್ದಾರೆ~ ಎಂದು ಡೊಂಗರಕೇರಿಯ ಹಾಲು ವಿತರಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಕೇರಳದ ಹಾಲಿನ ಡೇರಿಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಸೋಮವಾರ ಬೆಳಿಗ್ಗೆಯಿಂದ 30 ರೂಪಾಯಿಯಿಂದ 35 ರೂಪಾಯಿಗೆ ಹೆಚ್ಚಳವಾಗಿದೆ. ಹೆಚ್ಚಿಸಲಾದ ದರದಲ್ಲಿ ಲೀಟರ್‌ಗೆ 4.60 ರೂಪಾಯಿ ಹಾಲು ಉತ್ಪಾದಕರಿಗೆ ಸಿಗುತ್ತದೆ, ತಲಾ 20 ಪೈಸೆ ಸಹಕಾರ ಸಂಘಕ್ಕೆ ಮತ್ತು ಪ್ಯಾಕೆಟ್ ವಿತರಕರಿಗೆ ಸಿಗುತ್ತದೆ. ಕೇರಳದಲ್ಲಿ ಹೆಚ್ಚಳವಾದ ದರಕ್ಕೆ ಪರ್ಯಾಯವಾಗಿ ನಂದಿನಿ ಹಾಲನ್ನು ಪೂರೈಸಿ ಒಂದಿಷ್ಟು ಲಾಭ ಮಾಡಿಕೊಳ್ಳುವ ತಂತ್ರವನ್ನು ಕೆಲವು ಡೀಲರ್‌ಗಳು ಮಾಡಿದ್ದೇ ಹಾಲಿನ ಕೊರತೆಗೆ ಕಾರಣ ಎಂಬ ಮಾತು ನಗರದಲ್ಲಿ ಕೇಳಿಬಂದಿದೆ.

ಈ ಬಗ್ಗೆ ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರನ್ನು ಸಂಪರ್ಕಿಸಿದಾಗ, ಡೀಲರ್‌ಗಳಿಗೆ ಎಷ್ಟು ಬೇಕೋ ಅಷ್ಟು ಟೋನ್ಡ್ ಹಾಲು ಪೂರೈಸಲಾಗಿದೆ. ಟೋನ್ಡ್ ಹಾಲಿನ ಕ್ರೇಟ್‌ಗಳನ್ನು ಕಡಿಮೆ ಇಳಿಸಿದ ಬಗ್ಗೆ ತಮಗೆ ಮಾಹಿತಿ ಇಲ್ಲ, ಕೆಲವೊಂದು ಡೀಲರ್‌ಗಳು ಕೇರಳದತ್ತ ಹಾಲು ಸಾಗಿಸಿರುವ ಸಾಧ್ಯತೆಯೂ ಇಲ್ಲದಿಲ್ಲ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಕರಾವಳಿಗೂ ಕೆಎಂಎಫ್ ಬಿಸಿ!
ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಆಂತರಿಕ ಬಿಕ್ಕಟ್ಟಿಗೂ, ದ.ಕ.ಜಿಲ್ಲೆಗೂ ಯಾವುದೇ ಸಂಬಂಧ ಇಲ್ಲದಿದ್ದರೂ, ವ್ಯವಸ್ಥಾಪಕ ನಿರ್ದೇಶಕರ (ಎಂಡಿ) ನೇಮಕಾತಿಗೆ ಸಂಬಂಧಿಸಿದಂತೆ ಹಗ್ಗಜಗ್ಗಾಟ ನಡೆಯುತ್ತಿರುವ ಲಕ್ಷಣ ಕಾಣಿಸಿದೆ.

ಇದುವರೆಗೆ ಎಂ.ಡಿ. ಆಗಿದ್ದ ರವಿಕುಮಾರ್ ಕಾಕಡೆ ಅವರನ್ನು ಇತ್ತೀಚೆಗಷ್ಟೇ ಬೆಂಗಳೂರಿಗೆ ವರ್ಗಾಯಿಸಲಾಗಿತ್ತು. ಸದ್ಯ ಸತ್ಯನಾರಾಯಣ ಅವರು ಉಸ್ತುವಾರಿ ಎಂ.ಡಿ.ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಕಡೆ ಅವರನ್ನು ಮತ್ತೆ ಇಲ್ಲಿಗೆ ಎಂ.ಡಿ.ಆಗಿ ನಿಯೋಜಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.