ADVERTISEMENT

ಕೈದಿಗಳ ಬಿಡುಗಡೆಗೆ ಬದ್ಧ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ದಾವಣಗೆರೆ: ಸನ್ನಡತೆಯ ಆಧಾರದ ಮೇಲೆ ವಿಶೇಷ ಸಂದರ್ಭಗಳಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವುದು ಸಂಪ್ರದಾಯ. ಕೆಲ ತಾಂತ್ರಿಕ ತೊಂದರೆಗಳಿಂದ ಈ ಬಾರಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಇರುವ ತೊಡಕು ನಿವಾರಿಸಿ ಮುಂದಿನ ವರ್ಷದಿಂದ ಕೈದಿಗಳ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಂದೀಖಾನೆ, ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಜಿಲ್ಲಾ ವಿಶೇಷ ಉಪ ಕಾರಾಗೃಹಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸನ್ನಡತೆಯ ಆಧಾರದಲ್ಲಿ ಕೈದಿಗಳ ಬಿಡುಗಡೆಗೆ ಕೋರಿ ಕಳುಹಿಸಲಾಗಿದ್ದ ಕಡತವನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಅದಕ್ಕೆ ಕಾರಣ ಇಲಾಖೆ ಅಧಿಕಾರಿಗಳು. ಕೈದಿಗಳ ಸಂಪೂರ್ಣ ಮಾಹಿತಿ, ಸನ್ನಡತೆಯನ್ನು ಬಿಂಬಿಸುವ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ರಾಜ್ಯಪಾಲರು ಕಡತ ಹಿಂದಿರುಗಿಸಿದ್ದಾರೆ. ಇದನ್ನು ಸರಿಪಡಿಸಲಾಗುವುದು  ಎಂದರು.

ಪರಿಶಿಷ್ಟರಿಗೆ ಮೀಸಲಾದ ಶೇ 18ರ ಅನುದಾನ ಸದ್ಬಳಕೆಯಾಗುತ್ತಿಲ್ಲ. ಅನೇಕ ದಲಿತರು ಗೂಡುಗಳಂತಹ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ವಸತಿ ಕಲ್ಪಿಸಲು ಅಧಿಕಾರಿಗಳು ಮೊದಲು ಆದ್ಯತೆ ನೀಡಬೇಕು. ಜಮೀನು ಒತ್ತುವರಿ ತೆರವುಗೊಳಿಸಿ, ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು. ಅಂತಹ ಕಡೆ ಪರಿಶಿಷ್ಟರಿಗೆ ವಸತಿ ರೂಪಿಸಬೇಕು. ಅಂಬೇಡ್ಕರ್, ಜಗಜೀನವ್‌ರಾಂ ಭವನಕ್ಕೆ ಸ್ಥಳ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.