ADVERTISEMENT

ಕೈಮಗ್ಗ ಸತ್ಯಾಗ್ರಹಕ್ಕೆ ಸಾಹಿತಿಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ಬೆಂಗಳೂರು: ಕೈಮಗ್ಗ ನೇಕಾರಿಕೆಯಲ್ಲಿ ವಿದ್ಯುತ್‌ ಮಗ್ಗ ಅಳವಡಿಸುವ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ಕೈಮಗ್ಗ ಸತ್ಯಾಗ್ರಹಕ್ಕೆ ಹಿರಿಯ ಸಾಹಿತಿಗಳು, ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ. 

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ನಾ.ಡಿಸೋಜ, ಹಿರಿಯ ಸಾಹಿತಿಗಳಾದ ಯು.ಆರ್‌.ಅನಂತಮೂರ್ತಿ, ಡಾ.ಚೆನ್ನವೀರ ಕಣವಿ, ದೇವನೂರ ಮಹಾದೇವ, ಅಗ್ರಹಾರ ಕೃಷ್ಣಮೂರ್ತಿ, ಪ್ರಸಿದ್ಧ ಸರೋದ್‌ ವಾದಕ ರಾಜೀವ್‌ ತಾರಾನಾಥ್‌, ಹಿರಿಯ ನಿರ್ದೇಶಕ ಎಂ.ಎಸ್‌.ಸತ್ಯು, ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಹಿರಿಯ ಗಾಂಧಿವಾದಿ ಸುರೇಂದ್ರ ಕೌಲಗಿ, ಲೇಖಕಿ  ವಿಜಯಾ, ವಿಮರ್ಶಕರಾದ ಕೆ.ಮರುಳಸಿದ್ಧಪ್ಪ, ಡಿ.ಎಸ್‌.ನಾಗಭೂಷಣ,  ಲೇಖಕರಾದ ಡಿ.ಕೆ.ಚೌಟ, ಸವಿತಾ ನಾಗಭೂಷಣ, ಕಾ.ತ.ಚಿಕ್ಕಣ್ಣ, ಎಸ್.ಜಿ.ಸಿದ್ದರಾಮಯ್ಯ, ವಸ್ತ್ರವಿನ್ಯಾಸಕಿ ಜಯಂತಿ ಮರುಳಸಿದ್ಧಪ್ಪ ಹಾಗೂ ಇತರ ಲೇಖಕರು ಬೆಂಬಲ ಸೂಚಿಸಿದ್ದಾರೆ.

‘ನೇಕಾರಿಕೆಯ ದುಸ್ಥಿತಿಯಿಂದಾಗಿ ನೇಕಾರರು, ಹತ್ತಿ ಬೆಳೆಗಾರರು, ಬಣ್ಣ­ಗಾರರು ಹಾಗೂ ಇತರ ಕುಶಲ­ಕರ್ಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಮಗ್ಗದ ಯಾಂತ್ರೀಕರಣ ಪ್ರಕ್ರಿಯೆಯನ್ನು ನಿಲ್ಲಿಸಿ ನೇಕಾರರ ಕುಲಕಸುಬನ್ನು ಉಳಿಸಬೇಕು ಎಂಬುದು ನೇಕಾರರ ಬೇಡಿಕೆ. ಈಗ ಮಾರುಕಟ್ಟೆಗೆ ಶೇ 70ರಷ್ಟು ವಿದ್ಯುತ್‌ ಮಗ್ಗಗಳ ಕರಬೆರಕೆ ಬಟ್ಟೆಗಳೇ ಬಿಡುಗಡೆಯಾ­ಗುತ್ತಿವೆ. ಇದರಿಂದ ಖಾದಿ ಹಾಗೂ ಕೈಮಗ್ಗ ನೇಕಾರರ ಪರಿಸ್ಥಿತಿ ದಯನೀಯ­ವಾಗಿದೆ. ಸರ್ಕಾರದ ಒಡೆದು ಆಳುವ ನೀತಿಯ ಹಿಂದೆ ಬೃಹತ್‌ ಉದ್ದಿಮೆಗಳು, ಬಂಡವಾಳಶಾಹಿಗಳು ಹಾಗೂ ಅಂತರ­ರಾಷ್ಟ್ರೀಯ ಹಣಕಾಸಿನ ಕುಮ್ಮಕ್ಕು ಇದೆ’ ಎಂದು ಅವರು ದೂರಿದ್ದಾರೆ.

‘ಕೈಮಗ್ಗ ನೇಕಾರಿಕೆಯ ಯಾಂತ್ರೀ­ಕರಣ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಅದೇ ಹೊತ್ತಿಗೆ, ಒಂದು ತಪ್ಪನ್ನು ತಿದ್ದುವ ಅವಸರದಲ್ಲಿ ಮತ್ತೊಂದು ತಪ್ಪು ಘಟಿಸಬಾರದು. ಕೈಮಗ್ಗ ಮೀಸಲಾತಿ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಾಗ ಗ್ರಾಮೀಣ ಪ್ರದೇಶದ ವಿದ್ಯುತ್‌ ಮಗ್ಗಗಳ ಕಾರ್ಮಿಕರು ಬೀದಿಗೆ ಬೀಳಬಾರದು. ಅವರ ಪಾಲನೆ ಸರ್ಕಾರದ ಹೊಣೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.