ADVERTISEMENT

ಕೊಂಚಾವರಂನಲ್ಲಿ ಪದೇಪದೇ ಭೂಕಂಪನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಚಿಂಚೋಳಿ: ಆಂಧ್ರದ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಕೊಂಚಾವರಂ ಗ್ರಾಮದಲ್ಲಿ ಮೂರು ತಿಂಗಳಿನಿಂದ ಭೂಮಿಯಿಂದ ಪ್ರತಿದಿನ ವಿಚಿತ್ರವಾದ ನಿಗೂಢ ಸದ್ದು ಬರುತ್ತಿರುವುದರಿಂದ ಸ್ಥಳೀಯರು ಹೌಹಾರಿ ಹೋಗಿದ್ದಾರೆ.

ಯಾವುದೇ ನಿರ್ದಿಷ್ಟ ಸಮಯವಿಲ್ಲದೆ ಯಾವುದೋ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಭೂಮಿ ಸದ್ದು ಮಾಡುತ್ತಿರುವುದರಿಂದ ಗಡಿನಾಡಿನ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಶನಿವಾರ ಸಂಜೆ 3-30 ರಿಂದ 4.10 ನಿಮಿಷದ ಅವಧಿಯಲ್ಲಿ ಭೂಮಿಯಿಂದ ಭಾರಿ ಪ್ರಮಾಣದ ಸದ್ದು ಬಂದ ಬೆನ್ನ್ಲ್ಲಲೇ ಎರಡು ಮೂರು ಸೆಕೆಂಡ್ ಕಾಲ ಭೂಮಿ ಕಂಪಿಸಿ ನೆಲ ಅದುರಿದ ಮತ್ತು ಕಟ್ಟಡದ ಗೋಡೆಗಳು ಅಲುಗಾಡಿದ ಅನುಭವ ಆಗಿದೆ ಎಂದು ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ಭಾನುವಾರ ತಿಳಿಸಿದ್ದಾರೆ.

ಶನಿವಾರ ಸಂಜೆ ತಾವು ಹೋಟೆಲ್‌ನಲ್ಲಿದ್ದಾಗ ನಿಗೂಢವಾದ ಭಾರಿ ಸದ್ದು ಕೇಳಿ ಬಂದಿತು. ಇದರಿಂದ ಹೋಟೆಲ್ ಮೇಲಿನಿಂದ ಏನಾದರೂ ಬಿದ್ದಿರಬಹುದೆಂದು ಉಹಿಸಿ ಹೊರಗಡೆ ಹೋಗಿ ನೋಡಿದೆ. ಆದರೆ ಅಲ್ಲಿ ಏನೂ ಬಿದ್ದಿರಲಿಲ್ಲ. ಅದೇ ವೇಳೆಗೆ ಮನೆಯಿಂದ ನನ್ನ ತಾಯಿಯೂ ಹೊರಗೆ ಬಂದು ಇದೇ ಪ್ರಶ್ನೆ ಕೇಳಿ ತಮ್ಮ ಅನುಭವ ವಿವರಿಸಿದರು ಎಂದು ಸ್ವಾತಂತ್ರ್ಯಯೋಧ ಗಂಗಾರಾಮಜಿ ಅವರ ಪುತ್ರ ರವಿಕುಮಾರ ಅಗಲಡುಟಿ ಹೇಳಿದರು.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ತಪಾಸಣೆಯಲ್ಲಿ ತೊಡಗಿದ್ದ ಡಾ. ನರಸಿಂಹರೆಡ್ಡಿ ಅವರಿಗೂ ಭೂಮಿ ನಡುಗಿದ ಅನುಭವವಾಗಿದೆ. ಕೊಂಚಾವರಂ ಹಾಗೂ ಪೋಚಾವರಂ, ಮೊಗದಂಪುರ ಸುತ್ತಮುತ್ತ ಗ್ರಾಮಗಳಲ್ಲಿಯೂ ಭೂಮಿ ನಡುಗಿದೆ ಎಂದು ಆರೋಗ್ಯ ಇಲಾಖೆಯ ಸದಾಲಕ್ಷ್ಮೀ ತಿಳಿಸಿದ್ದಾರೆ.

ನಮ್ಮ ಗ್ರಾಮದಲ್ಲಿ ಮೂರು ತಿಂಗಳಿಂದ ಭೂಮಿಯಿಂದ ಆಗಾಗ ವಿಚಿತ್ರ ಸದ್ದು ಬರುತ್ತಿದೆ. ಇದರಿಂದ ಗ್ರಾಮದಲ್ಲಿ ಆತಂಕ ಉಂಟಾಗಿದೆ. ಜನರು ಭಯ ಭೀತಿಯಿಂದ ಜೀವನ ನಡೆಸುವಂತಾಗಿದೆ ಎಂದು ಯುವ ಮುಖಂಡ ಪುಟ್ಟರಾಜ ತಿಳಿಸಿದರು.

ತಾಲ್ಲೂಕಿನಲ್ಲಿ ಭೂಮಿಯಿಂದ ಆಗಾಗ ವಿಚಿತ್ರ ರೀತಿಯ ಸದ್ದು ಮಾಡುತ್ತ ಭೂಮಿ ಕಂಪಿಸಿ ಸುದ್ದಿ ಮಾಡಿದ ಹಸರಗುಂಡಗಿ ಗುರಂಪಳ್ಳಿ ಗ್ರಾಮಗಳಲ್ಲಿ ಕಂಪನ ಸ್ಥಗಿತಗೊಂಡಿದೆ. ಆದರೆ ಇದು ಕೊಂಚಾವರಂಗೆ ಸ್ಥಳಾಂತರಗೊಂಡು ಜನರಲ್ಲಿ ಭೀತಿ ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.