
ಬೆಂಗಳೂರು: ಕೊಡಗಿನಲ್ಲಿ ವರುಣ ಶನಿವಾರ ಆರ್ಭಟಿಸಿದ್ದಾನೆ. ಕರಾವಳಿಯ ಕೆಲವೆಡೆ ಬಿರುಸಾಗಿ, ಮಲೆನಾಡಿನ ಕೆಲವು ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಸುರಿಸಿದ್ದಾನೆ.ಅಲ್ಲದೆ, ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ಹರಿದುಬರುತ್ತಿರುವ ನೀರಿನಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ.
ಕೃಷ್ಣಾ ನದಿಯ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಹಟ್ಟಿ–ಕೊಕಟನೂರ ಹಾಗೂ ಉಗಾರ–ಕುಡಚಿ, ರಾಯಬಾಗದ ಚಿಂಚಲಿ– ಕುಡಚಿ ಸೇತುವೆ ಮುಳುಗಡೆಯಾಗಿವೆ. ಮಲಪ್ರಭಾ ಪ್ರವಾಹದಲ್ಲಿ ಖಾನಾಪುರ ತಾಲ್ಲೂಕಿನ ಅಸೋಗಾ–ಘೋಸಗಾಳಿ, ಘಟಪ್ರಭಾ ಪ್ರವಾಹದಲ್ಲಿ ಗೋಕಾಕ ತಾಲ್ಲೂಕಿನ ಅವರಾದಿ ಸೇತುವೆ ಮುಳುಗಡೆಯಾಗಿದೆ. ಜಿಲ್ಲೆಯ 13 ಸೇತುವೆಗಳು ಮುಳುಗಡೆಯಾಗಿವೆ.
ಕೃಷ್ಣಾ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣವು ಇನ್ನು 30 ಸಾವಿರ ಕ್ಯುಸೆಕ್‌ನಷ್ಟು ಹೆಚ್ಚಾದರೆ ಸದಲಗಾ–ಬೋರಗಾಂವ ಮತ್ತು ಯಕ್ಸಂಬಾ–ದಾನವಾಡ ಸೇತುವೆಗಳೂ ಜಲಾವೃತಗೊಳ್ಳುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಜಿಟಿಜಿಟಿ ಮಳೆ ಸುರಿದಿದೆ.
ಧಾರವಾಡ ಜಿಲ್ಲೆಯ ಬಹುತೇಕ ಕಡೆ ಶನಿವಾರ ಬಿರುಸಿನ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ಕೆಲ ಹೊತ್ತು ಬಿರುಸಿನ ಮಳೆ ಸುರಿದಿದೆ. ಮುಂಡಗೋಡ, ಯಲ್ಲಾ ಪುರ, ಶಿರಸಿ, ಸಿದ್ದಾಪುರದಲ್ಲಿ ಸಾಧಾರಣ ಮಳೆಯಾಗಿದೆ.
ಕಡಲಿಗಿಳಿಯದ ದೋಣಿಗಳು: ಅರಬ್ಬಿ ಸಮುದ್ರದಲ್ಲಿ ಗಾಳಿಯು ಜೋರಾಗಿ ಬೀಸುತ್ತಿರುವುದರಿಂದ ಭಾರಿ ಗಾತ್ರದ ತೆರೆಗಳು ಏಳುತ್ತಿವೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ಬಹುತೇಕ ದೋಣಿಗಳು ಕಡಲಿಗಿಳಿದಿಲ್ಲ.
ಕೊಡಗಿನಲ್ಲಿ ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ಶನಿವಾರ ಬಿರುಸಿನ ಮಳೆಯಾಗಿದ್ದು, ಕಾವೇರಿ ನದಿ ಹರಿವು ಮತ್ತಷ್ಟು ಏರಿಕೆಯಾಗಿದೆ. ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಮಡಿಕೇರಿ, ಕೆ.ನಿಡುಗಣಿ, ಮಾಂದಲ್‌ಪಟ್ಟಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ.
ಕೆಆರ್‌ಎಸ್ ನೀರಿನ ಮಟ್ಟ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಶನಿವಾರ ಸಾಧಾರಣ ಮಳೆಯಾಗಿದೆ. ಸಾಗರ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರದಲ್ಲಿ ಮಳೆ ಸುರಿದಿದೆ. ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಕೆಲವೆಡೆ ಶನಿವಾರ ಬಿಟ್ಟುಬಿಟ್ಟು ಜಿಟಿಜಿಟಿ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.