ADVERTISEMENT

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:40 IST
Last Updated 12 ಏಪ್ರಿಲ್ 2018, 19:40 IST
ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡದ ಬಳಿ ಭತ್ತದ ಗದ್ದೆಗೆ ಬುಧವಾರ ರಾತ್ರಿ ಸಿಡಿಲು ಬಡಿದು, ಫಸಲು ಸುಟ್ಟಿರುವುದು
ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡದ ಬಳಿ ಭತ್ತದ ಗದ್ದೆಗೆ ಬುಧವಾರ ರಾತ್ರಿ ಸಿಡಿಲು ಬಡಿದು, ಫಸಲು ಸುಟ್ಟಿರುವುದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು. ಸಂಜೆ 5.30ರ ಸುಮಾರಿಗೆ ಆರಂಭವಾದ ಮಳೆ ಗುಡುಗು, ಸಿಡಿಲಿನೊಂದಿಗೆ ಒಂದು ಗಂಟೆ ಅಬ್ಬರಿಸಿತು.

ಮಡಿಕೇರಿಯಲ್ಲಿ ಸುರಿದ ಭಾರಿ ಮಳೆಯಿಂದ ಚರಂಡಿಗಳು ಉಕ್ಕಿ ಹರಿದವು. ಸುಂಟಿಕೊಪ್ಪ, ಕೆದಕಲ್‌, ಕೊಡಗರಹಳ್ಳಿ ವ್ಯಾಪ್ತಿಯಲ್ಲಿ ರಸ್ತೆಗೆ ಮರಗಳು ಉರುಳಿ ಬಿದ್ದು ಸಂಚಾರ ಬಂದ್‌ ಆಗಿತ್ತು. ತಾಳತ್ತಮನೆ, ಗಾಳಿಬೀಡು, ಮಾದಲ್‌ಪಟ್ಟಿಯಲ್ಲೂ ಭಾರಿ ಮಳೆಯಾಗಿದೆ.

ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಸಿದ್ದಾಪುರ, ಗೋಣಿಕೊಪ್ಪಲು, ಪೊನ್ನಪ್ಪಸಂತೆ, ಕೊಟ್ಟಗೇರಿ, ಬಾಳೆಲೆ, ಕಾನೂರು, ಪಾಲಿಬೆಟ್ಟ, ಹಾತೂರು ಭಾಗಗಳಲ್ಲೂ ಸಾಧಾರಣ ಮಳೆ ಸುರಿಯಿತು.

ADVERTISEMENT

ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ ತಾಲ್ಲೂಕಿನಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ರಿಪ್ಪನ್‌ಪೇಟೆ, ಕೋಡೂರು, ಹುಂಚ ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ಸಂಜೆ ಕೆಲ ಕಾಲ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಸಿಡಿಲಿಗೆ ಭತ್ತದ ಗದ್ದೆ ಭಸ್ಮ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡ ತಾಂಡ, ಹೆರಕಲ್ ಗ್ರಾಮಗಳಲ್ಲಿ ಬುಧವಾರ ರಾತ್ರಿ ಹೊಡೆದ ಸಿಡಿಲು ಹಾಗೂ ನಂತರ ಸುರಿದ ಆಲಿಕಲ್ಲು ಮಳೆಗೆ 500 ಎಕರೆಯಷ್ಟು ಭತ್ತದ ಫಸಲು ಹಾಳಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದಾರೆ.

ಕೆಂಚನಗುಡ್ಡದ ಡಿ.ರಾಘವೇಂದ್ರ ಎಂಬುವವರಿಗೆ ಸೇರಿದ ಭತ್ತದ ಗದ್ದೆಗೆ ಸಿಡಿಲು ಬಡಿದಿದ್ದರಿಂದ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ
ಭತ್ತದ ಫಸಲು ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿದೆ. ಇದೇ ವೇಳೆಗೆ ಆಲಿಕಲ್ಲು ಮಳೆ ಸುರಿದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ರೈತರು ತಿಳಿಸಿದ್ದಾರೆ.

ಗೋಡೆ ಕುಸಿದು 9 ಜನರಿಗೆ ಗಾಯ: ಕೊಪ್ಪಳ ಜಿಲ್ಲೆಯ ಹನುಮಸಾಗರ ಸಮೀಪದ ಬೆನಕನಾಳದಲ್ಲಿ ಬುಧವಾರ ರಾತ್ರಿ ಬೀಸಿದ ಬಿರುಗಾಳಿಗೆ ಮನೆಗೋಡೆ ಕುಸಿದು 9 ಜನ ಗಾಯಗೊಂಡಿದ್ದಾರೆ.

ನಿಂಗಯ್ಯ ಮಂಟಗೇರಿ ಅವರ ಕುಟುಂಬ ಶೇಂಗಾ ರಾಶಿ ಮಾಡುವುದಕ್ಕಾಗಿ ಜಮೀನಿನಲ್ಲಿದ್ದ ಮನೆಯಲ್ಲಿ ವಾಸವಾಗಿದ್ದರು. ಸಿಮೆಂಟ್‌ ಇಟ್ಟಿಗೆಗಳಿಂದ ನಿರ್ಮಿಸಲಾಗಿದ್ದ ಮನೆಗೋಡೆ ಕುಸಿದು ಗಾಯಗೊಂಡ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮಲಗಿದ್ದ ಸಂದರ್ಭದಲ್ಲಿ ಗೋಡೆ ಸಮೇತ ಹೆಂಚುಗಳು ನಮ್ಮ ಮೇಲೆ ಬಿದ್ದವು. ಕೂಗಾಟ ಕೇಳಿದ ಸುತ್ತಲಿನ ಜನ ದೌಡಾಯಿಸಿ ಬಂದು ಇಟ್ಟಿಗೆಗಳನ್ನು ಹೊರತೆಗೆದು ರಕ್ಷಿಸಿದರು’ ಎಂದು ಬಸಯ್ಯ ಮಂಟಗೇರಿ ಹೇಳಿದರು.

ವಿಜಯಪುರದಲ್ಲಿ 6 ಸೆಂ.ಮೀ. ಮಳೆ

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ವಿಜಯಪುರದಲ್ಲಿ 6 ಸೆಂ.ಮೀ, ಬೀದರ್ ಜಿಲ್ಲೆಯಲ್ಲಿ 4, ಹಾವೇರಿ, ಬಾದಾಮಿ, ತಾಳಗುಪ್ಪ, ಕೊಪ್ಪ, ಮಡಿಕೇರಿಯಲ್ಲಿ ತಲಾ 2 ಹಾಗೂ ಕಲಬುರ್ಗಿ, ಚಿತ್ತಾಪುರ, ಶೃಂಗೇರಿ, ಕಳಸ, ಬಾಳೆಹೊನ್ನೂರಿನಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ.

ಬಳ್ಳಾರಿಯಲ್ಲಿ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಒಳನಾಡು ಹಾಗೂ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಡಿಲು ಬಡಿದು ಇಬ್ಬರು ಸಾವು

ಉತ್ತರ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಒಂದು ಎತ್ತು ಹಾಗೂ 12 ಕುರಿಗಳು ಸತ್ತಿವೆ.

ಬಾಗಲಕೋಟೆ ಜಿಲ್ಲೆಯ ಕುಳಗೇರಿ ರೈತ ಶಿವಾನಂದ ಬೀರಪ್ಪ ತುಡಬಿನ (30) ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಾದೇವಕೊಪ್ಪದ ನಿವಾಸಿ ಜಾನು ವಿಠ್ಠು ತೋರವತ್ (31) ಮೃತಪಟ್ಟವರು.

ಮಹಾಕೂಟ ಸಮೀಪದ ಹೊಲದ ಶೆಡ್‌ನಲ್ಲಿ ಕಟ್ಟಿದ್ದ ಒಂದು ಎತ್ತು ಹಾಗೂ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಬೆಟದೂರಲ್ಲಿ ಮಕ್ತುಮಸಾಬ್ ಹಸನ್‌ಸಾಬ್ ಹಾರೋಬಿಡಿ ಅವರಿಗೆ ಸೇರಿದ 12 ಕುರಿಗಳು ಸಿಡಿಲು ಬಡಿದು ಸತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.