ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಓಂಕಾರ ವಲಯ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿದ ಆರೋಪ ಹೊತ್ತಿರುವ ಸಿಐಡಿ ಡಿವೈಎಸ್‌ಪಿ ಟಿ.ಕೆ.ಧರ್ಮೇಶ್ ಅವರನ್ನು ರಾಜ್ಯ ಸರ್ಕಾರ ಕೊನೆಗೂ ಸೇವೆಯಿಂದ ಅಮಾನತು ಮಾಡಿದೆ.
ಜ.31ರ ಬೆಳಗಿನ ಜಾವ ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ಡಿವೈಎಸ್‌ಪಿ ಧರ್ಮೇಶ್ ಹಾಗೂ ಅವರ ತಂಡ, ಗುಂಡು ಹಾರಿಸಿ ಚುಕ್ಕೆ ಜಿಂಕೆಯನ್ನು ಕೊಲೆ ಮಾಡಿತ್ತು. ಗುಂಡಿನ ಸದ್ದು ಕೇಳಿ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯಾಧಿಕಾರಿಗಳು, ಅದೇ ದಿನ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಬಂಧನವಾಗಿ ತಿಂಗಳು ಕಳೆದರೂ ಸರ್ಕಾರ ಅವರನ್ನು ಸೇವೆಯಿಂದ ಅಮಾನತು ಮಾಡಿರಲಿಲ್ಲ.
ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ‘ಜಿಂಕೆ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ಅವರು ಕಳೆದ ವಾರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆ ವರದಿ ಆಧರಿಸಿ ಧರ್ಮೇಶ್ ಅವರನ್ನು ಅಮಾನತು ಮಾಡಲಾಗಿದೆ’ ಎಂದರು.
ಬಂಧಿತ ಸಿಬ್ಬಂದಿಯನ್ನು 48 ಗಂಟೆಯೊಳಗೆ ಅಮಾನತುಗೊಳಿಸದ ಕ್ರಮಕ್ಕೆ ಪ್ರತಿಕ್ರಿಯಿಸಿದ ಜಾರ್ಜ್, ‘ಬಂಡೀಪುರದಲ್ಲಿ ನಕ್ಸಲೀಯರು ಅಡಗಿದ್ದಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಅವರ ವಿರುದ್ಧ ಕಾರ್ಯಾ ಚರಣೆ ನಡೆಸಲು ಅರಣ್ಯಕ್ಕೆ ನುಗ್ಗಿದ್ದಾಗಿ ಧರ್ಮೇಶ್ ಹೇಳಿಕೆ ಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಂತರ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿಚಾರಣೆ ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸುವುದು ತಡವಾಯಿತು’ ಎಂದರು.
ಧರ್ಮೇಶ್ ಸೇರಿದಂತೆ ಮೈಸೂರಿನ ಕೆ.ಆರ್. ಮೊಹಲ್ಲಾದ ಅತೀಕ್ ಅಹಮದ್, ಮಹಮದ್ ಹಮೀದ್, ಫರೀದ್ ಹರಿಮಿಯ, ರಘು ಮತ್ತು ಮಂಜಯ್ಯ ಜಿಂಕೆ ಕೊಂದ ಆರೋಪಿಗಳು. ಅವರೆಲ್ಲ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಶೀಘ್ರ ಆರೋಪಪಟ್ಟಿ
‘ಗುಂಡೇಟಿನಿಂದಲೇ ಜಿಂಕೆ ಮೃತಪಟ್ಟಿದೆ ಎಂದು ಶವಪರೀಕ್ಷೆ ವರದಿಯಲ್ಲಿ ಖಚಿತಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಜಿಂಕೆಯ ಅಂಗಾಂಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಜತೆಗೆ ತನಿಖೆಗೆ ಮದ್ದು ಗುಂಡು ತಜ್ಞರ ಸಲಹೆಯನ್ನೂ ಪಡೆದಿದ್ದೇವೆ.
ಆರೋಪಿಗಳ ವಿರುದ್ಧ ಏಪ್ರಿಲ್ ಮೊದಲ ವಾರದೊಳಗೆ ಆರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.