ADVERTISEMENT

ಕೊಳೆಗೇರಿಯಲ್ಲಿ ಕಂಡ ಆಡಳಿತ ‘ಸೇವೆ’

112ನೇ ರ‍್ಯಾಂಕ್ ಪಡೆದ ಮಣಿಪಾಲದ ರಂಜನ್ ರಾಜಗೋಪಾಲ್ ಶೆಣೈ

ಎಂ.ನವೀನ್ ಕುಮಾರ್
Published 2 ಜೂನ್ 2017, 20:16 IST
Last Updated 2 ಜೂನ್ 2017, 20:16 IST
ರಂಜನ್‌
ರಂಜನ್‌   

ಉಡುಪಿ: ಕೇಂದ್ರ ಲೋಕಸೇವಾ ಆಯೋಗ 2016ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮಣಿಪಾಲದ ರಂಜನ್ ರಾಜಗೋಪಾಲ ಶೆಣೈ ಅವರು 112ನೇ ರ‍್ಯಾಂಕ್ ಪಡೆದಿದ್ದಾರೆ.

ಐಐಟಿಯಲ್ಲಿ ಪದವಿ ಪಡೆದ ರಂಜನ್ ಅವರು ಯಾವುದೇ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ಪಡೆದು ಲಕ್ಷಾಂತರ ರೂಪಾಯಿ ಸಂಬಳ ಎಣಿಸಬಹುದಿತ್ತು. ಆದರೆ ದೇಶ– ಜನರ ಬಗ್ಗೆ ಇರುವ ಕಾಳಜಿ ಅವರನ್ನು ಕರೆದೊಯ್ದದ್ದು ಕೊಳಚೆ ಪ್ರದೇಶದತ್ತ. ‘ಟೀಚ್ ಇಂಡಿಯಾ’ ಎಂಬ ಸರ್ಕಾರೇತರ ಸಂಸ್ಥೆಗೆ ಸೇರಿದ ಅವರು ಮುಂಬೈನ ಅತಿ ದೊಡ್ಡ ಕೊಳಚೆ ಪ್ರದೇಶವಾಗಿರುವ ಧಾರಾವಿ ಸ್ಲಂನಲ್ಲಿ ಅವಕಾಶ ವಂಚಿತ ಮಕ್ಕಳಿಗೆ ಎರಡು ವರ್ಷ ಪಾಠ ಮಾಡಿದ್ದಾರೆ.

ಮಣಿಪಾಲ ಕಸ್ತೂರಬಾ ವೈದ್ಯಕೀಯ ಕಾಲೇಜಿನ ಸಹ ಡೀನ್‌ ಮತ್ತು ಶಸ್ತ್ರಚಿಕಿತ್ಸೆ ಪ್ರಾಧ್ಯಾಪಕ ಡಾ. ರಾಜಗೋಪಾಲ್ ಶೆಣೈ ಮತ್ತು ಅದೇ ಕಾಲೇಜಿನ ಅನೆಸ್ತೇಷಿಯಾ ವಿಭಾಗದ ಮುಖ್ಯಸ್ಥೆ ಡಾ. ಅನಿತಾ ಶೆಣೈ ಅವರ ಪುತ್ರ. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ಬ್ರಹ್ಮಾವರದ ಲಿಟ್ಲ್‌ರಾಕ್ ಶಾಲೆಯಲ್ಲಿ ಪೂರೈಸಿದ ಅವರು, ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಐಐಟಿ ಜೆಇಇ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಅವರು ಇಂಟಗ್ರೇಟೆಡ್ ಫಿಸಿಕ್ಸ್‌ ವಿಷಯದಲ್ಲಿ ಐಐಟಿ ಖಾನ್‌ಪುರದಿಂದ 2011ರಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.

ADVERTISEMENT

2013ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಸಫಲರಾಗಲಿಲ್ಲ. 2014ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದು 391ನೇ ರ‍್ಯಾಂಕ್ ಪಡೆದರು. ಅದು  ತೃಪ್ತಿ ನೀಡದ ಕಾರಣ ಮತ್ತೊಮ್ಮೆ 2016ರಲ್ಲಿ ಪರೀಕ್ಷೆ ತೆಗೆದುಕೊಂಡು ಯಶಸ್ವಿಯಾಗಿದ್ದಾರೆ.

**

ನಿಜದರ್ಶನ ಮಾಡಿಸಿದ ಧಾರಾವಿ ಸ್ಲಂ

ಮುಂಬೈನ ಧಾರಾವಿ ಸ್ಲಂನಲ್ಲಿ ಎರಡು ವರ್ಷ ಮಕ್ಕಳಿಗೆ ಪಾಠ ಮಾಡಿದ್ದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣ ಎಂದು ಹೇಳುತ್ತಾರೆ ರಂಜನ್‌ ಶೆಣೈ.

‘ಎರಡು ವರ್ಷದ ಅನುಭವ ತಳಮಟ್ಟದ ವಾಸ್ತವಗಳನ್ನು ಅರಿಯಲು ಅವಕಾಶ ನೀಡಿತು. ಸತ್ಯಾಂಶ ಏನೆಂದು ಖುದ್ದಾಗಿ ನೋಡುವ ಅವಕಾಶ ಕಲ್ಪಿಸಿತು. ಐಎಎಸ್ ಅಧಿಕಾರಿಯಾಗಿದ್ದರೆ ನೇರವಾಗಿ ಬಡವರ ಪರ ಕೆಲಸ ಮಾಡುವ ಅವಕಾಶ ಇರುತ್ತಿತ್ತು, ವಿದೇಶಾಂಗ ಸೇವೆಗೆ ಹೋಗುವುದರಿಂದ ಈಗ ಅದು ಸಾಧ್ಯವಾಗದಿರಬಹುದು. ಆದರೆ, ದೇಶದ ಬಡ ಜನರ ಪರವಾಗಿ ಕೆಲಸ ಮಾಡುವ ತುಡಿತ ಮಾತ್ರ ಇದ್ದೇ ಇರುತ್ತದೆ. ನಿವೃತ್ತಿಯ ನಂತರವಾದರೂ ಅವರ ಸೇವೆ ಮಾಡುತ್ತೇನೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.