ADVERTISEMENT

ಕೊಳ್ಳೇಗಾಲ: ಕದ್ದ ಆನೆ ದಂತಗಳ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಕೊಳ್ಳೇಗಾಲ: ಸಹಜವಾಗಿ ಮೃತಪಟ್ಟಿದ್ದ ಆನೆಯ 2 ದಂತಗಳನ್ನು ದುಷ್ಕರ್ಮಿಗಳು ಕದ್ದು ಅಡಗಿಸಿಟ್ಟಿದ್ದ ಸ್ಥಳವನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿ ದಂತಗಳನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ ತಾಲ್ಲೂಕಿನ ಮಲೆ ಮಹದೇಶ್ವರಬೆಟ್ಟ ಅಸ್ತೂರು ಗ್ರಾಮದ ಬಳಿ ಕೋಳಿಮಟ್ಟಿ ಹಳ್ಳದಲ್ಲಿ 15 ದಿನ ಹಿಂದೆ ಮೃತಪಟ್ಟಿದ್ದ ಸಲಗದ ದಂತಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದರು.

ದಂತ ದೋಚಿರುವ ಬಗ್ಗೆ ಶುಕ್ರವಾರ ದೊರೆತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಡಿಸಿಎಫ್ ನಾರಾಯಣಸ್ವಾಮಿ ದಂತ ಪತ್ತೆ ಕಾರ್ಯಾಚರಣೆಯನ್ನು ಆರ್‌ಎಫ್‌ಒ ನೇತೃತ್ವ ತಂಡಕ್ಕೆ ವಹಿಸಿದ್ದರು.  ಇದರಂತೆ ಕಾರ್ಯಪ್ರವೃತರಾದ ಸಿಸಿಎಫ್ ಅಜಯ್‌ಮಿಶ್ರ ಅವರು ಆನೆ ಮೃತಪಟ್ಟಿದ್ದ ಸ್ಥಳಕ್ಕೆ ಶನಿವಾರ ಬೆಳಿಗ್ಗೆ  ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯ ನಾಗರಾಜು ಸಲಗದ ಮರಣೋತ್ತರ ಪರೀಕ್ಷೆ ನಡೆಸಿದರು.

ನಂತರ ಕಳ್ಳರು ದಂತ ಅಡಗಿಸಿರುವ ಜಾಗವನ್ನು ಪತ್ತೆ ಹಚ್ಚಿದ ಅರಣ್ಯಾಧಿಕಾರಿಗಳ ತಂಡ  ಎರಡು ದಂತಗಳನ್ನು ಶನಿವಾರ ವಶಪಡಿಸಿಕೊಂಡಿದೆ. ಡಿಸಿಎಫ್ ನಾರಾಯಣಸ್ವಾಮಿ, ಮಹದೇಶ್ವರ ಬೆಟ್ಟ ಉಪ ವಿಭಾಗ ಎಸಿಎಫ್ ಬಿ.ಎಸ್.ನಾಗೇಂದ್ರರಾವ್, ಅರಣ್ಯ ಸಂಚಾರಿ ದಳ ಎಸಿಎಫ್ ಟಿ.ವಿ. ಭಾನುಪ್ರಕಾಶ್, ಆರ್‌ಎಫ್‌ಒ ನಂಜುಂಡಯ್ಯ ಇದ್ದರು. ದಂತ ಕಳವು ಅಪರಾಧ. ಇಂಥ ಪ್ರಕರಣಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು ಡಿಸಿಎಫ್ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.