ADVERTISEMENT

ಕೋಟಿ ಸುರಿದರೂ ಹರಿಯದ ಭದ್ರಾ ನೀರು!

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST
ಕೋಟಿ ಸುರಿದರೂ ಹರಿಯದ ಭದ್ರಾ ನೀರು!
ಕೋಟಿ ಸುರಿದರೂ ಹರಿಯದ ಭದ್ರಾ ನೀರು!   

ದಾವಣಗೆರೆ: ಬಯಲು ಸೀಮೆಯ ಜಿಲ್ಲೆಗೆ ನೀರಾವರಿ ಭಾಗ್ಯ ಕಲ್ಪಿಸುವ ಭದ್ರಾ ನಾಲೆಗೆ ಸಾವಿರ ಕೋಟಿ ರೂಪಾಯಿಗಳನ್ನು ಸುರಿದು ಆಧುನಿಕ ಸ್ಪರ್ಶ ನೀಡಿದರೂ ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಯದೆ ರೈತರು ಪರಿತಪಿಸುವಂತಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ 1962ರಲ್ಲಿ ಅಣೆಕಟ್ಟೆ ನಿರ್ಮಿಸಲಾಯಿತು. 1966ರಲ್ಲಿ 103 ಕಿ.ಮೀ. ಉದ್ದದ ಭದ್ರಾ ಬಲದಂಡೆ ನಿರ್ಮಾಣವಾದದ್ದೇ ತಡ, ಬಯಲು ಸೀಮೆಯ ರೈತರ ಕನಸು ಚಿಗುರೊಡೆಯಿತು. ಒಣ ಭೂಮಿಯಲ್ಲಿ ಬತ್ತ ನಳನಳಿಸಿತು. ಕಬ್ಬು ಆಳೆತ್ತರ ಬೆಳೆಯಿತು. ಹರಿವು ಕಡಿಮೆ ಇದ್ದಲ್ಲಿ ಮೆಕ್ಕೆಜೋಳ ಮೊಳೆಯಿತು.

ಇಳೆ ತಂಪಾಗಿ ಹೊಸ ಕಳೆ ಮೂಡಿತು. ಒಟ್ಟಾರೆ ಕಾಲುವೆ ನಿರ್ಮಾಣಕ್ಕೆ ತಗುಲಿದ್ದು 10 ವರ್ಷ. ಬಲದಂಡೆಗೆ 2,650 ಕ್ಯೂಸೆಕ್ ನೀರು ಹರಿಸಲಾಯಿತು. ಈ ನಾಲೆಯು ಸೂಳೆಕೆರೆ ಬಳಿ ಎರಡು ಕವಲಾಗಿ ದಾವಣಗೆರೆ ಮತ್ತು ಮಲೇಬೆನ್ನೂರಿಗೆ ವಿಂಗಡಣೆಯಾಗುತ್ತದೆ. 

ADVERTISEMENT

46 ವರ್ಷಗಳ ಹಿಂದಿನ ಇಂತಹ ಮಹತ್ವದ ನಾಲೆ, ಹಲವು ವರ್ಷಗಳಿಂದ ದುಃಸ್ಥಿತಿ ತಲುಪಿದ್ದು, 2007ರಲ್ಲಿ ಆಧುನೀಕರಣಕ್ಕೆ ಚಾಲನೆ ನೀಡಲಾಯಿತು. ಮೊದಲು ರೂ 470 ಕೋಟಿ ಇದ್ದ ಬಜೆಟ್ ನಂತರ ಸರಿಸುಮಾರು ಸಾವಿರ ಕೋಟಿ ಮುಟ್ಟಿತು. ಆಧುನೀಕರಣದ ನಂತರ ದಾವಣಗೆರೆ ಶಾಖಾ ನಾಲೆಗೆ 1,200, ಮಲೇಬೆನ್ನೂರು ಶಾಖಾ ನಾಲೆಗೆ 700 ಕ್ಯೂಸೆಕ್ ನೀರು ಹರಿಸುವ ಗುರಿ ಹೊಂದಲಾಗಿತ್ತು.

ನಿರೀಕ್ಷೆಯಂತೆ ಕಾಮಗಾರಿ ನಡೆದರೂ, ಕೋಟಿಗಳ ಲೆಕ್ಕಾಚಾರ, ತಂತ್ರಜ್ಞಾನ ಎಲ್ಲ ಇದ್ದರೂ ನಾಲೆ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಭದ್ರಾ ಕಾಲುವೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್ ಬೇಸರ ವ್ಯಕ್ತಪಡಿಸುತ್ತಾರೆ.

ಈಗ ಹೇಗಿದೆ?: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆಲವು ಪ್ರದೇಶ, ಶಾಮನೂರು, ಮಿಟ್ಲಕಟ್ಟೆ, ಮಲೇಬೆನ್ನೂರು ಕಡೆಗಳಲ್ಲಿ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. ಆದರೆ, ಚನ್ನಗಿರಿ ತಾಲ್ಲೂಕಿನ ಉಪ ವಿಭಾಗ, ಹಾಗೂ ಹಲವಾರು ಉಪ ಕಾಲುವೆಗಳ ಕಾಮಗಾರಿ ಗುಣಮಟ್ಟದಲ್ಲಿ ಆಗಿಲ್ಲ ಎಂದು ರೈತರು ಆರೋಪಿಸುತ್ತಾರೆ. ಅನೇಕ ಕಡೆ ಕಾಲುವೆ ಒಣಗಿದೆ. ಕಲ್ಲು, ಹೂಳು ತುಂಬಿದೆ. ಕೆಲವು ಕಡೆ ಕಾಂಕ್ರಿಟ್ ಕಿತ್ತುಹೋಗಿದೆ. 

ಜಲಾಶಯದಲ್ಲಿ ನೀರು ಬಿಟ್ಟ 15 ದಿನಗಳಲ್ಲಿ ಹೊನ್ನಾಳಿ ಭಾಗಕ್ಕೆ ನೀರು ಬರಬೇಕು. ಆಧುನೀಕರಣದ ಕಳಪೆ ಕಾಮಗಾರಿ ಹಾಗೂ ಅನಧಿಕೃತ ಪಂಪ್‌ಸೆಟ್‌ಗಳಿಂದಾಗಿ ಹರಿವು ಆರಂಭವಾಗಿ ತಿಂಗಳಾದರೂ ತಾಲ್ಲೂಕಿಗೆ ನೀರು ಬರುವುದಿಲ್ಲ ಎನ್ನುತ್ತಾರೆ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಭರಮಪ್ಪ ಮಾಸಡಿ.

ಹೊನ್ನಾಳಿ ತಾಲ್ಲೂಕು ಉಜನೀಪುರ ಗ್ರಾಮದ ಬತ್ತ ಬೆಳೆಗಾರ ಮೋಹನದಾಸ ನಾಯ್ಕ ಹೇಳುವಂತೆ, ಆಧುನೀಕರಣದ ಕಾಲದಲ್ಲಿ ಸಿಮೆಂಟ್, ಜಲ್ಲಿ, ಮರಳನ್ನು ಸ್ಥಳೀಯ ರೈತರೇ ಕಳವು ಮಾಡಿದ್ದರು. ಇದರಿಂದ ಶೇ 50ರಷ್ಟು ಮಾತ್ರ ಕಾಮಗಾರಿ ಉತ್ತಮವಾಗಿ ನಡೆದಿದೆ. ನಾಲೆಗಳ ಗೋಡೆಗಳಲ್ಲಿ ರಂಧ್ರ ಬಿದ್ದು ನೀರು ಸೋರಿಕೆಯಾಗುತ್ತದೆ.

ಹರಪನಹಳ್ಳಿ ತಾಲ್ಲೂಕು ಹಿರೇಮೇಗಳಗೇರಿಗೆ ಭದ್ರಾ ನಾಲೆ ಹರಿವು (ಕೊನೆಯ ಭಾಗ) ಅಂತ್ಯಗೊಳ್ಳುತ್ತದೆ. ಇಲ್ಲಿನ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಲ್ಲಿ ಇಂದಿಗೂ ನೀರು ಹರಿದಿಲ್ಲ. ಕಾಲುವೆಗಳ ದುಃಸ್ಥಿತಿ ಜತೆಗೆ, ಈ ಬಾರಿ ಮಳೆಯ ಮುನಿಸೂ ಸೇರಿಕೊಂಡು ಬದುಕು ಬರಡಾಗುವ ಆತಂಕ ಜಿಲ್ಲೆಯ ರೈತರಲ್ಲಿ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.