ADVERTISEMENT

ಕೋಟ್ಯಧಿಪತಿಗಳು, ಮಾಜಿ ಉಗ್ರರು ಕಣದಲ್ಲಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಗುವಾಹಟಿ (ಐಎಎನ್‌ಎಸ್): ಕೋಟ್ಯಧಿಪತಿಗಳು, ಮಾಜಿ  ಉಗ್ರರು ಮತ್ತು ದೋಷಾರೋಪಣೆಗೆ ಒಳಗಾಗಿರುವ ರಾಜಕಾರಣಿಗಳು ಹೀಗೆ ಎಲ್ಲಾ ಬಣ್ಣಗಳ ಅಭ್ಯರ್ಥಿಗಳು ಅಸ್ಸಾಂನಲ್ಲಿ ಏಪ್ರಿಲ್ 4ರಂದು ನಡೆಯಲಿರುವ ವಿಧಾನಸಭೆ ಮೊದಲ ಹಂತದ ಚುನಾವಣಾ ಕಣದಲ್ಲಿದ್ದಾರೆ.ಮೊದಲ ಹಂತದ ಚುನಾವಣೆಗೆ 529 ಕ್ಷೇತಗಳಲ್ಲಿ ನಾಮಪತ್ರ ಸಲ್ಲಿಸಿರುವವರಲ್ಲಿ ಸೂಟೀ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಮುಖ ವಿರೋಧ ಪಕ್ಷ ಅಸ್ಸಾಂ ಗಣ ಪರಿಷತ್‌ನ (ಎಜಿಪಿ) ಅಭ್ಯರ್ಥಿ ಪದ್ಮ ಹಜಾರಿಕಾ ಅವರು ಅತಿ ಸಿರಿವಂತ ಅಭ್ಯರ್ಥಿ ಆಗಿದ್ದಾರೆ.ಮೊದಲ ಹಂತದ ಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಸೋಮವಾರ ಕಡೆ ದಿನ.

ಹಜಾರಿಕಾ ಅವರು ಘೋಷಿಸಿರುವ ಆಸ್ತಿಯ ಮೊತ್ತ ಸುಮಾರು ರೂ 5 ಕೋಟಿ. ಕಳೆದ 10 ವರ್ಷದಿಂದ ಎಜಿಪಿ ಅಧಿಕಾರದಿಂದ ದೂರವೇ ಉಳಿದಿದ್ದರೂ, ರಾಜಕೀಯವನ್ನೇ ಏಕೈಕ ವೃತ್ತಿಯಾಗಿಸಿಕೊಂಡ ಹಜಾರಿಕಾ ಅವರಂತಹ ಕೋಟ್ಯಧಿಪತಿಗಳು ಅಭ್ಯರ್ಥಿಗಳಾಗಿರುವ ಪಟ್ಟಿಯನ್ನು ಈ ಪಕ್ಷ ಹೊಂದಿದೆ.ಇದಲ್ಲದೆ ಈ ಬಾರಿ ನಿಷೇಧಿತ ಉಲ್ಫಾದ ಐವರು ಮಾಜಿ ಉಗ್ರರೂ ಕಣದಲ್ಲಿದ್ದಾರೆ. ಇವರಲ್ಲಿ ಇಬ್ಬರು ಈಗಾಗಲೇ ಪಕ್ಷೇತರರಾಗಿ ಶಾಸಕರಾಗಿರುವವರೂ ಇದ್ದಾರೆ.

‘ಈ ಹಿಂದೆ ನಾನು ಉಲ್ಫಾ ಸಂಘಟನೆಯಲ್ಲಿದ್ದೆ ಎಂಬುದು ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ನಾನೀಗ ಮುಖ್ಯವಾಹಿನಿಗೆ ಬಂದಿದ್ದೇನೆ. ಜನರ ಆಶೀರ್ವಾದ ನನಗಿದ್ದು ನಾನು ಜಯ ಗಳಿಸುತ್ತೇನೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಅಭ್ಯರ್ಥಿ ಪ್ರಫುಲ್ಲಾ ಬೊರಾ ಅಲಿಯಾಸ್ ಢೇಕಿಯಲ್ ಫುಕನ್.ಯಾವುದೇ ದೋಷಾರೋಪಣೆ ಎದುರಿಸುತ್ತಿರುವ ನಾಯಕರಿಗೆ ತಮ್ಮ ಪಕ್ಷ ಟಿಕೆಟ್ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ತರುಣ್ ಗೊಗಾಯ್ ಹೇಳಿದ್ದರು. ದರೆ ಕಾಂಗ್ರೆಸ್ ಇದನ್ನು ನಿರ್ಲಕ್ಷ್ಯಿಸಿದ್ದು ಮಾಜಿ ಮುಖ್ಯಮಂತ್ರಿ ಹಿತೇಶ್ವರ್ ಸೈಕಿಯಾ ಅವರ ಪುತ್ರ ದೇವವ್ರತ ಸೈಕಿಯಾ ಅವರಿಗೆ ಟಿಕೆಟ್ ನೀಡಿದೆ.ಬಹುಕೋಟಿ ಪಶುವೈದ್ಯಕೀಯ ಹಗರಣದಲ್ಲಿ ಸಿಬಿಐ ಸೈಕಿಯಾ ವಿರುದ್ಧ ದೋಷಾರೋಪಣ ಪಟ್ಟಿ ಹೊರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.