ADVERTISEMENT

ಕೋರ್ಟ್ ಕಟ್ಟಡದಿಂದ ಜಿಗಿದು ಕೈದಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST

ತುಮಕೂರು: ವಿಚಾರಣಾಧೀನ ಕೈದಿಯೊಬ್ಬರು ಶನಿವಾರ, ನಗರದ ಕೋರ್ಟ್‌ ಸಂಕೀರ್ಣದ 3ನೇ ಅಂತಸ್ತಿನಿಂದ ಜಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಚಂದ್ರು (29), ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ನಾಗಲಾಪುರ ಗ್ರಾಮದವರು. 2017ರಲ್ಲಿ ಮನೆಯ ಮುಂದೆ ಆಡುತ್ತಿದ್ದ ಆರು ವರ್ಷದ ಬಾಲಕಿ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದರು. ಚೇಳೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಶನಿವಾರ ವಿಚಾರಣೆಗೆ ಕರೆತರಲಾಗಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ತಿಳಿಸಿದರು.

‘ಆರೋಪಿ ಪರ ವಕೀಲರು ಹಾಜರಿಲ್ಲದ ಕಾರಣ ನ್ಯಾಯಾಧೀಶರು ಪ್ರಕರಣ ವಿಚಾರಣೆಯನ್ನು ಮುಂದಕ್ಕೆ ಹಾಕಿದ್ದರು. ಕೋರ್ಟ್ ಕೊಠಡಿಯಿಂದ ಹೊರಗಡೆ ಬರುತ್ತಿದ್ದಂತೆ ಚಂದ್ರು ಕೆಳಕ್ಕೆ ಜಿಗಿದರು. ತೀವ್ರವಾಗಿ ಗಾಯಗೊಂಡಿದ್ದ ಆರೋಪಿಯನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸ್ಪಂದಿಸದೇ ಮೃತಪಟ್ಟಿದ್ದಾರೆ’ ಎಂದು ಹೇಳಿದರು.

ADVERTISEMENT

‘ಇಬ್ಬರು ಕಾನ್‌ಸ್ಟೆಬಲ್‌ಗಳು ಆರೋಪಿಯನ್ನು ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆ ತಂದಿದ್ದರು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೋರ್ಟ್ ಆವರಣಕ್ಕೆ ಕೋಳ ಹಾಕದೇ ಆರೋಪಿಯನ್ನು ಕರೆ ತರಲಾಗಿತ್ತು. ವಿಚಾರಣೆ ಹಂತದಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ತನಿಖೆ ನಡೆಸಲಾಗುವುದು’ ಎಂದರು.

‘ತಮ್ಮ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥನಾಗಿದ್ದ. ಚಿಕಿತ್ಸೆ ಕೊಡಿಸಿದ ಬಳಿಕ ಸರಿ ಹೋಗಿದ್ದ. ಒಂದು ದಿನ ಮನೆಯ ಮುಂದೆ 6 ವರ್ಷದ ಬಾಲಕಿ ಆಟವಾಡುತ್ತಿದ್ದಳು. ಅದೇನಾಯಿತೊ ಏನೋ, ಇದ್ದಕ್ಕಿದ್ದಂತೆ ಹಲ್ಲೆ ಮಾಡಿದ್ದ. ಗ್ರಾಮಸ್ಥರು ಆತನನ್ನು ಕಂಬಕ್ಕೆ ಕಟ್ಟಿ ಹೊಡೆದಿದ್ದರು. ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ಆತನ ವಿರುದ್ಧ ದಾಖಲಾಗಿದ್ದ ಪ್ರಕರಣ ರಾಜಿ ಹಂತಕ್ಕೆ ಬಂದಿತ್ತು’ ಎಂದು ಆರೋಪಿಯ ಸಹೋದರ ಹನುಮಂತರಾಜು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.