ADVERTISEMENT

ಕೋಲಾರ: ಬಸ್ಸಿಗೆ ಬೆಂಕಿ, ಕಲ್ಲೆಸೆತ- ಗಾಳಿಯಲ್ಲಿ ಗುಂಡು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ಕೋಲಾರ: ರಾಜ್ಯ ರಸ್ತೆ ಸಾರಿಗೆ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ ಬೈಕಿನ ಹಿಂಬದಿ ಸವಾರ ಮೃತಪಟ್ಟ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ನೂರಾರು ಮಂದಿ ಬಸ್ಸಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಗರದ ಹೊಸ ಬಸ್ ನಿಲ್ದಾಣ ಸಮೀಪದ ಎಂ.ಬಿ.ರಸ್ತೆ ಬಳಿ ಗುರುವಾರ ರಾತ್ರಿ ನಡೆದಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ದಿಢೀರನೆ ನಡೆದ ಘಟನೆಯ ಪರಿಣಾಮವಾಗಿ ಮಧ್ಯರಾತ್ರಿವರೆಗೂ ಪರಿಸ್ಥಿತಿ ಪ್ರಕ್ಷುಬ್ಧವಾಗಿತ್ತು.

ಘಟನೆಯಲ್ಲಿ 11 ಪೊಲೀಸರಿಗೆ ಗಾಯವಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇಬ್ಬರು ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಮೂರು ವಾಹನ, ಅಗ್ನಿಶಾಮಕ ದಳದ ವಾಹನದ ಗಾಜುಗಳು ಒಡೆದಿವೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾತ್ರಿ ಸುಮಾರು 9.45ರ ವೇಳೆಯಲ್ಲಿ  ತಿರುಪತಿ ಕಡೆಯಿಂದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಹೊಸ ಬಸ್ ನಿಲ್ದಾಣದೆಡೆಗೆ ಸಾಗುತ್ತಿದ್ದಾಗ, ಎಂ.ಬಿ.ರಸ್ತೆಯ ಕುತುಬ್‌ಗೋರಿ ಮೊಹಲ್ಲಾ ಕಡೆಯಿಂದ ಅದೇ ರಸ್ತೆಗೆ ಪ್ರವೇಶ ಪಡೆದ ಬೈಕ್ ಸವಾರರು ಜಾರಿ ಬಿದ್ದರು.
 
ಅದೇ ಕ್ಷಣದಲ್ಲಿ ಬಂದ ಬಸ್ಸಿನ ಹಿಂದಿನ ಚಕ್ರ ಹಿಂಬದಿ ಸವಾರ, ವಿಜಯಪುರದ ನಿವಾಸಿ ಅಜೀಂ (31) ಎಂಬ ಯುವಕನ ಮೇಲೆ ಹರಿದು ಆತ ಸ್ಥಳದಲ್ಲೆ ಮೃತಪಟ್ಟ. ಕೆಲವೇ ನಿಮಿಷಗಳಲ್ಲಿ ಜನ ಗುಂಪುಗೂಡಿದರು. ಗಣೇಶ ಹಬ್ಬದ ಕಾರ್ಯಕ್ರಮಗಳ ಸಲುವಾಗಿ ಬಂದೋಬಸ್ತ್‌ಗೆ ನಿಯೋಜಿತರಾಗಿದ್ದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ಉದ್ರಿಕ್ತಗೊಂಡ 400ರಿಂದ 500 ಮಂದಿ ಶವವನ್ನು ಸ್ಥಳಾಂತರಿಸಲು ಬಿಡದೆ ಕಲ್ಲು ತೂರಾಟ ನಡೆಸಿದರು. ಉದ್ರಿಕ್ತರ ಸಂಖ್ಯೆ ಹೆಚ್ಚಿತ್ತು. ಪೊಲೀಸ್ ಸಿಬ್ಬಂದಿಯ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಕಲ್ಲು ತೂರಾಟ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವಾಗಲೇ ಒಂದು ಗುಂಪು ಬಸ್ಸನ್ನು ಉರುಳಿಸಲು ಯತ್ನಿಸಿತು.
 
ಕಲ್ಲಿನೇಟಿನಿಂದ ಗಾಸಿಗೊಂಡಿದ್ದ ಪೊಲೀಸರು ಮತ್ತು ಉದ್ರಿಕರ ನಡುವಿನ ಘರ್ಷಣೆಯ ವೇಳೆಯಲ್ಲೆ ಕಿಡಿಗೇಡಿಗಳು ಬಸ್ಸಿಗೆ ಬೆಂಕಿಯನ್ನೂ ಇಟ್ಟರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ವಾಹನಕ್ಕೂ ಕಲ್ಲು ತೂರಿ ಅದನ್ನೂ ಹಿಮ್ಮೆಟ್ಟಿಸಿದರು.

ಸ್ಥಳಕ್ಕೆ ಧಾವಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್ ಅವರೂ ಕಲ್ಲಿನೇಟು ತಾಳದೆ ವಾಪಸಾದರು. ನಂತರ ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಪೂರ್ಣಪ್ರಮಾಣದಲ್ಲಿ ಬಸ್ ಸುಟ್ಟರೂ ಉದ್ರಿಕ್ತರು ಕಲ್ಲು ತೂರಾಟ ನಿಲ್ಲಿಸಲಿಲ್ಲ.
 
ನಂತರ ಕೆಎಸ್‌ಆರ್‌ಪಿ, ಜಿಲ್ಲಾ ಮೀಸಲು ಪಡೆ ಪೊಲೀಸರು ಸನ್ನಿವೇಶವನ್ನು ನಿಯಂತ್ರಣಕ್ಕೆ ತಂದರು. ಮಧ್ಯರಾತ್ರಿ ವೇಳೆಗೆ ಉದ್ರಿಕ್ತರ ಗುಂಪು ಕರಗಿದ ಬಳಿಕ ಸನ್ನಿವೇಶ ನಿಯಂತ್ರಣಕ್ಕೆ ಬಂತು. ಬೆಳಗಿನ ಜಾವದ ವೇಳೆಗೆ ಸುಟ್ಟ ಬಸ್ ಸ್ಥಳಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.