ಬೆಂಗಳೂರು: `ಯುಪಿಎ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದೆ' ಎಂದು ವಿರೋಧಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಉಲ್ಲೇಖಿಸಿದ್ದು ವಿಧಾನ ಪರಿಷತ್‌ನಲ್ಲಿ ಶುಕ್ರವಾರ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ವಿರೋಧಪಕ್ಷ ಸದಸ್ಯರು ವಿಷಯ ಮಂಡಿಸುವಾಗ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸುತ್ತಾರೆ ಎಂದು ಆಕ್ಷೇಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸುವ ಕುರಿತು ಮಾತನಾಡಿದ ಸದಾನಂದ ಗೌಡ, `ರಾಜ್ಯದ ಭ್ರಷ್ಟಾಚಾರ ತಲೆ ತಗ್ಗಿಸುವಂತಹುದು ಎಂದು ರಾಜ್ಯಪಾಲರು ಕಿಡಿಕಾರಿದ್ದಾರೆ. ಆದರೆ, ಯುಪಿಎ ಸರ್ಕಾರ ಐದು ವರ್ಷಗಳಲ್ಲಿ 6.5 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಎಸಗಿದೆ' ಎಂದು ಆರೋಪಿಸಿದರು.
ಈ ಹೇಳಿಕೆ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಕೆರಳಿಸಿತು. `ಸದಾನಂದ ಗೌಡರು ಇಲ್ಲಿ ಅನವಶ್ಯಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯಪಾಲರ ಭಾಷಣಕ್ಕೂ ಯುಪಿಎ ಸರ್ಕಾರಕ್ಕೂ ಏನು ಸಂಬಂಧ' ಎಂದು ಅವರು ಪ್ರಶ್ನಿಸಿದರು. ದೇಶಪಾಂಡೆ ಬೆಂಬಲಕ್ಕೆ ಆಡಳಿತ ಪಕ್ಷದ ಸದಸ್ಯರು ಧಾವಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಆರೋಪ-ಪ್ರತ್ಯಾರೋಪ ಮಾಡಿದರು. ಈ ಸಂದರ್ಭ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಭಾಪತಿ ಡಿ.ಎಚ್.ಶಂಕರಮೂರ್ತಿ, `ಸದನದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಲು ಅವಕಾಶ ಇಲ್ಲ. ಆದರೆ, ಸದಸ್ಯರು ಯಾವ ವಿಷಯ ಮಾತನಾಡಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಆ ವಿಷಯ ಸದಸ್ಯರ ವಿವೇಚನೆಗೆ ಬಿಟ್ಟಿದ್ದು' ಎಂದು ಸ್ಪಷ್ಟಪಡಿಸಿದರು.
ಸಭಾನಾಯಕ ಎಸ್.ಆರ್.ಪಾಟೀಲ್, `ಸದಸ್ಯರು ನಿಯಮ ಮೀರಿ ಮಾತನಾಡಿದಾಗ ನಿಯಂತ್ರಣ ಹೇರಬೇಕು' ಎಂದು ಮನವಿ ಮಾಡಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಾನಂದಗೌಡ, `ಆಡಳಿತ ಪಕ್ಷದ ನಿರ್ದೇಶನದ ಪ್ರಕಾರ, ನೀವು ಹೇಳಿದ ಹಾಗೆ ನಾವು ಮಾತನಾಡಬೇಕಾ?' ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗಲೂ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಚಿವ ಅಭಯಚಂದ್ರ ಜೈನ್ ಹಾಗೂ ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ, `ಹೊರಗೆ ಹೋಗುವುದಿದ್ದರೆ ಬೇಗ ಹೋಗಿ' ಎಂದು ಬಿಜೆಪಿ ಸದಸ್ಯರನ್ನು ಕೆಣಕಿದರು. ಈ ನುಡಿ ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಲು ಮುಂದಾದರು.
ಸದಸ್ಯರ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ ಡಿ.ಎಚ್.ಶಂಕರಮೂರ್ತಿ, `ಇದು ಅತಿಯಾಯಿತು. ಸದನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದುದು ಎಲ್ಲರ ಜವಾಬ್ದಾರಿ. ಇಲ್ಲಿ ಆಡಳಿತ ಪಕ್ಷದ ಜವಾಬ್ದಾರಿ ಜಾಸ್ತಿ ಇದೆ' ಎಂದು ಕಿವಿಮಾತು ಹೇಳಿದರು.
ಸದಾನಂದ ಗೌಡ ಮಾತನಾಡಿ, `ಸಭಾನಾಯಕರು ಒಳ್ಳೆಯ ವ್ಯಕ್ತಿ. ಕೆಳಮನೆಯಿಂದ ಬಂದ ಸಚಿವರು ಗಲಾಟೆ ಮಾಡುತ್ತಿದ್ದಾರೆ. ಯುಪಿಎ ಹೆಸರು ಉಲ್ಲೇಖವಾಗುತ್ತಿದ್ದಂತೆ ಅವರು ಉರಿದು ಬೀಳುತ್ತಿದ್ದಾರೆ. ಅವರಿಗೆ ಎಲ್ಲ ಬಯಲಾಗುತ್ತದೆ ಎಂಬ ಭಯ' ಎಂದು ಟೀಕಿಸಿದರು. ಈ ಮಾತಿಗೆ ಸಚಿವರಾದ ಆರ್.ವಿ.ದೇಶಪಾಂಡೆ, ವಿನಯಕುಮಾರ್ ಸೊರಕೆ, ಬಿ.ರಮಾನಾಥ ರೈ, ಅಭಯಚಂದ್ರ ಜೈನ್ ವಿರೋಧ ವ್ಯಕ್ತಪಡಿಸಿದರು.
`ವಿಧಾನಪರಿಷತ್‌ಗೆ ಸಚಿವರು ಬರುವುದು ಬೇಡ ಎಂಬ ಆದೇಶ ಮಾಡಿಸಿ. ನಾವು ಇಲ್ಲಿಗೆ ಬರುವುದಿಲ್ಲ' ಎಂದು ದೇಶಪಾಂಡೆ ತಿರುಗೇಟು ನೀಡಿದರು.ಜೆಡಿಎಸ್‌ನ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ಮಧ್ಯಪ್ರವೇಶಿಸಿ, `ವಿರೋಧ ಪಕ್ಷದ ಸದಸ್ಯರು ವ್ಯಂಗ್ಯ, ಹಾಸ್ಯದ ಮೂಲಕ ಸರ್ಕಾರವನ್ನು ಮೂದಲಿಸುವ ಕೆಲಸ ಮಾಡಬೇಕು. ಸದನದಲ್ಲಿ ಆರೋಗ್ಯಕರ ಚರ್ಚೆ ಆಗಬೇಕು.
ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಆಡಳಿತ ಪಕ್ಷದ ಸದಸ್ಯರು ಕೈಮಡಚಿ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದರು' ಎಂದು ನೆನಪಿಸಿದರು. `ನಾಣಯ್ಯ ಅವರು ಸದನದ ಹಾದಿ ತಪ್ಪಿಸುತ್ತಿದ್ದಾರೆ' ಎಂದು ಡಿ.ವಿ.ಎಸ್. ದೂರಿದರು. `ನಾನು ಯಾವತ್ತೂ ಸದನದ ಹಾದಿ ತಪ್ಪಿಸುವ ಕೆಲಸ ಮಾಡಿಲ್ಲ' ಎಂದು ನಾಣಯ್ಯ ನುಡಿದರು.
ಆಡಳಿತ ಪಕ್ಷದ ಸದಸ್ಯರು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಜೆಡಿಎಸ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, `ಸಭಾಪತಿಯವರು ಅಸಹಾಯಕತೆ ವ್ಯಕ್ತಪಡಿಸುವುದು ಸರಿಯಲ್ಲ. ತಪ್ಪು ಮಾಡಿದ ಸದಸ್ಯರನ್ನು ಸದನದಿಂದ ಹೊರಕ್ಕೆ ಹಾಕಿ' ಎಂದು ಸಲಹೆ ನೀಡಿದರು. ಬಳಿಕ ಸಭಾಪತಿ ಅವರು ಸದನವನ್ನು 15 ನಿಮಿಷ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.