ADVERTISEMENT

ಖರ್ಚಾಗದೇ ಉಳಿದ ಮೊತ್ತ ₹1.15 ಲಕ್ಷ ಕೋಟಿ

ಸಾಲದ ಸಾರ್ಥಕತೆ ಪ್ರಶ್ನಿಸಿದ ಎಚ್.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 19:46 IST
Last Updated 16 ಜೂನ್ 2017, 19:46 IST
ಖರ್ಚಾಗದೇ ಉಳಿದ ಮೊತ್ತ ₹1.15 ಲಕ್ಷ ಕೋಟಿ
ಖರ್ಚಾಗದೇ ಉಳಿದ ಮೊತ್ತ ₹1.15 ಲಕ್ಷ ಕೋಟಿ   

ಬೆಂಗಳೂರು: ‘ಹಿಂದಿನ ಮೂರು ವರ್ಷಗಳಲ್ಲಿ ವಿವಿಧ ಇಲಾಖೆಗೆ ಬಿಡುಗಡೆ ಮಾಡಿದ ಮೊತ್ತದಲ್ಲಿ ₹1.15 ಲಕ್ಷ ಕೋಟಿ ಖರ್ಚಾಗದೆ ಉಳಿದಿದೆ’  ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇಲಾಖಾವಾರು ಬೇಡಿಕೆಗಳ ಮೇಲೆ ಶುಕ್ರವಾರ ಮಾತನಾಡಿದ ಅವರು, ಅದೇ ಅವಧಿಯಲ್ಲಿ ರಾಜ್ಯ ಸರ್ಕಾರ ಮಾಡಿದ ಸಾಲದ ಮೊತ್ತ ₹1.36 ಲಕ್ಷ ಕೋಟಿಗೆ ಮುಟ್ಟಿದೆ. ಖರ್ಚು ಮಾಡಲು ಆಗದೇ ಇದ್ದರೆ ಇಷ್ಟು ಬೃಹತ್‌ ಮೊತ್ತದ ಹಣವನ್ನು ಸಾಲ ಎತ್ತುವ ಅಗತ್ಯವೇನಿತ್ತು’ ಎಂದೂ ಅವರು ಪ್ರಶ್ನಿಸಿದರು.

‘ಸರ್ಕಾರ ನಡೆಸುವವರೇ ಸಾವಿರಾರು ಕೋಟಿ ಸಾಲ ಮಾಡಿದ್ದೀರಿ. ಹಾಗಿರುವಾಗ ಸಾಮಾನ್ಯ ರೈತರ ಪರಿಸ್ಥಿತಿ ಹೇಗಿರಬೇಕು. ಸರ್ಕಾರ ನೀಡಿದ ಲೆಕ್ಕದಂತೆ ಹಿಂದಿನ ಮೂರು ವರ್ಷಗಳಲ್ಲಿ ₹60 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. ಈ ವರ್ಷ ಮುಂಗಾರಿನಲ್ಲಿ ₹17,000 ಕೋಟಿ ಮೌಲ್ಯದ ಬೆಳೆ ಹಾಳಾಗಿದೆ. ಕೇಂದ್ರ ಸರ್ಕಾರ ನೀಡಿದ ₹1,700 ಕೋಟಿಯಲ್ಲಿ ತಲಾ ರೈತರಿಗೆ  ಒಂದೋ ಎರಡೋ ಸಾವಿರ ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದೀರಿ. ಅದರಿಂದ ರೈತ ಸಂಕಷ್ಟ ಪರಿಹಾರವಾಗುತ್ತದೆಯೇ’ ಎಂದು ಕೇಳಿದರು.

‘ಸಾಲಮನ್ನಾ ವಿಷಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಕೈತೋರಿಸಿಕೊಳ್ಳುತ್ತಾ ಕುಳಿತರೆ ರಾಜ್ಯದ ರೈತರ ಕಷ್ಟ ಕೇಳುವವರು ಯಾರು’ ಎಂದು ಪ್ರಶ್ನಿಸಿದರು.

‘ಇಂತಹ ಪರಿಸ್ಥಿತಿಯಲ್ಲಿ ಸಾಲಮನ್ನಾ ಮಾಡುವ ನಿರ್ಣಯ ಕೈಗೊಳ್ಳಿ. ಚುನಾವಣೆಗೆ ಹೋಗುವ ಮುನ್ನ ಮಾಡುತ್ತೀರಾ, ಡಿಸೆಂಬರ್‌ನಲ್ಲಿ ಮಾಡುತ್ತೀರಾ ಎಂಬ ಬಗ್ಗೆ ದಿನಾಂಕ ಪ್ರಕಟಿಸಿ. ಆಗ ಮಾತ್ರ ರೈತರು ಉಳಿಯುತ್ತಾರೆ’ ಎಂದು ಹೇಳಿದರು.



ಜಾತಿ ರಾಜಕಾರಣ ಬಿಡಿ: ‘ಬಸವಣ್ಣನ ಅನುಯಾಯಿ ಎಂದು ವೇದಿಕೆಯಲ್ಲಿ ಹೇಳಿಕೊಳ್ಳುವವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ತಮ್ಮ ಆತ್ಮ ಮುಟ್ಟಿ ನೋಡಿಕೊಳ್ಳಲಿ’ ಎಂದು  ಹೇಳಿದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಕುಟುಕಿದರು.

‘ಅನುಯಾಯಿ ಎಂದು ಹೇಳಿಕೊಂಡರೆ ಏನು ಪ್ರಯೋಜನ. ಅವರು ಮಾಡುವುದೆಲ್ಲ ಜಾತಿ ರಾಜಕಾರಣ. ಅದನ್ನು ಬಿಟ್ಟು ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡುವುದನ್ನು ಕಲಿಯಲಿ’ ಎಂದು ತಿವಿದರು.

‘ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ವಾಗ್ದಾನ ಮಾಡಿ ಅಧಿಕಾರಕ್ಕೆ ಬಂದವರು ಗೃಹ ಸಚಿವರ ಭದ್ರತಾ ಸಲಹೆಗಾರರಾಗಿ ಯಾರನ್ನು ನೇಮಕ ಮಾಡಿಕೊಂಡಿದ್ದಾರೆ. ಭದ್ರತಾ ಸಲಹೆಗಾರರ (ಕೆಂಪಯ್ಯ) ಬಗ್ಗೆ ಗುಪ್ತಚರ ಇಲಾಖೆ 2009ರಲ್ಲಿ ರಹಸ್ಯ ವರದಿ ಸಲ್ಲಿಸಿತ್ತು. ಅದರಿಂದ ಸಮಸ್ಯೆಯಾಗುತ್ತದೆ ಎಂದು ಗೊತ್ತಾಗುತ್ತಿದ್ದಂತೆ ವೈಯಕ್ತಿಕ ಕಾರಣದಿಂದ ಕೆಲಸ ಮಾಡಲು ಆಗುವುದಿಲ್ಲ ಎಂಬ ಒಕ್ಕಣೆ ನೀಡಿ ಆಗಸ್ಟ್‌ ತಿಂಗಳಿನಲ್ಲಿ ಸ್ವಯಂ ನಿವೃತ್ತಿ ಪಡೆದರು. ಆಗ ರಾಜೀನಾಮೆ ನೀಡಿದವರು ಈಗ ಹೇಗೆ ಕೆಲಸ ಮಾಡುತ್ತಾರೆ. ಇದು ಸ್ವಚ್ಛ ಆಡಳಿತವೇ. ಯಾರಿಗೆ ರಕ್ಷಣೆ ಕೊಡುತ್ತಿದ್ದೀರಿ’ ಎಂದು  ಪ್ರಶ್ನಿಸಿದರು.

‘ಅಂಧ ವ್ಯಕ್ತಿಯೊಬ್ಬ 2011ರ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿಯಲ್ಲಿ ತಹಸೀಲ್ದಾರ್‌ ಹುದ್ದೆಗೆ ಆಯ್ಕೆಯಾಗಿದ್ದ. ಜಾತಿಯ ಕಾರಣಕ್ಕೆ ಇಡೀ ನೇಮಕಾತಿಯನ್ನೇ ರದ್ದುಪಡಿಸಿ, ಆಯ್ಕೆಯಾದವರನ್ನು ಫುಟ್‌ಬಾಲ್‌ ಆಡಿದಿರಿ. ಅದೇ ಅಂಧ ವ್ಯಕ್ತಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 340 ರ್‌್ಯಾಂಕ್‌ ಪಡೆದಿದ್ದಾನೆ. ಅಲ್ಲಿಗೆ ನಿಮ್ಮ ಸರ್ಕಾರದ ನಿರ್ಧಾರಕ್ಕೆ ಏನು ಬೆಲೆ ಬಂತು’ ಎಂದು ಕಿಡಿಕಾರಿದರು.

‘ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ನೌಕರಿ ಪಡೆದು ವಂಚಿಸಿರುವ  ಕಂದಾಯ ಇಲಾಖೆ ಅಧಿಕಾರಿಯೊಬ್ಬರಿಗೆ ಐಎಎಸ್‌ ಅಧಿಕಾರಿಯಾಗಿ ಬಡ್ತಿ ಕೊಡಿಸಲು ಮುಂದಾಗಿದ್ದೀರಿ. ದೆಹಲಿಯ ಕರ್ನಾಟಕ ಭವನದ ಪ್ರಾದೇಶಿಕ ಆಯುಕ್ತರಾಗಿ ನಿಯೋಜಿಸಲು  ಸಿದ್ಧತೆ ನಡೆಸಿದ್ದೀರಿ. ನೀವು ಬಸವಣ್ಣನ ಅನುಯಾಯಿಯೇ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಇನ್ನೂ ಹತ್ತು ಕೇಸು ಹಾಕಲಿ’
‘ದೇವೇಗೌಡರ ಜತೆಜತೆಗೆ ಬೆಳೆದವರು, ದಶಕಗಳ ಕಾಲ ನಮ್ಮ ಜತೆಗೆ ಇದ್ದವರು ನನ್ನ ಮೇಲೆ ಕೇಸು ಹಾಕಿಸಿದ್ದಾರೆ. ಇನ್ನೂ ಹತ್ತು ಕೇಸು ಹಾಕಿಸಲಿ.  ಎದುರಿಸಲು ನಾನು ತಯಾರು’ ಎಂದು ಕುಮಾರಸ್ವಾಮಿ ಹೇಳಿದರು.

‘ನನ್ನ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೇ ದಿಕ್ಕು ತಪ್ಪಿಸಲಾಗಿದೆ.  ಅದು ಮುಂದಿನ ದಿನಗಳಲ್ಲಿ ಹೊರಬರುತ್ತದೆ. ಬಹುತೇಕರು ಗಾಜಿನ ಮನೆಯಲ್ಲಿ ಇದ್ದಾರೆ. ನಾನು ಬೀದಿಯಲ್ಲಿ ಇದ್ದೇನೆ.  ನಾನೂ ಆ ಜಾಗಕ್ಕೆ (ಮುಖ್ಯಮಂತ್ರಿ) ಬರುತ್ತೇನೆ. ಆಗ ಏನು ಮಾಡಬೇಕು ಎಂಬುದು ನನಗೂ ಗೊತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.