ADVERTISEMENT

`ಗಂಡಿಗೆ ಮಗು ಮಾಡುವುದು ಗೊತ್ತೇ ಹೊರತು...!

ವಚನ ಸಾಹಿತ್ಯ ಗೋಷ್ಠಿಗೆ 25 ಸಾವಿರ ಸಭಿಕರು!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2013, 19:59 IST
Last Updated 10 ಫೆಬ್ರುವರಿ 2013, 19:59 IST

ವಿಜಾಪುರ: ಅಲ್ಲಿ ಭರ್ತಿ 25 ಸಾವಿರ ಸಭಿಕರಿದ್ದರು. ಸಿನಿಮಾ ತಾರೆಯರು, ಸಂಗೀತಗಾರರು, ಗಾಯಕರು, ಜನಪ್ರಿಯ ವ್ಯಕ್ತಿಗಳು, ರಾಜಕೀಯ ಪಕ್ಷಗಳ ಮುಖಂಡರು ಇರಲಿಲ್ಲ. ಅಲ್ಲಿ `ವಚನ ಸಾಹಿತ್ಯ' ಗೋಷ್ಠಿ ನಡೆಯುತ್ತಿತ್ತು, ಆದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಭಿಕರಿದ್ದರು.

ಹೌದು,  ಸೈನಿಕ ಶಾಲೆ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರದ ಗೋಷ್ಠಿಯಲ್ಲಿ ಇಂತಹ ಚಿತ್ರಣ ಕಂಡುಬಂದಿತು.

ಬಹುತೇಕರು ಪರಸ್ಪರ ಮಾತನಾಡುವುದರಲ್ಲಿ, ಮೊಬೈಲ್‌ಗೆ ಕಿವಿಕೊಟ್ಟು ಕುಳಿತುಕೊಂಡಿದ್ದರು. ಹಲವರು ತಮ್ಮ ಕೈಯಲ್ಲಿರುವ ದಿನಪತ್ರಿಕೆಗಳನ್ನು ಬೀಸಣಿಕೆಯನ್ನಾಗಿ ಮಾಡಿಕೊಂಡಿದ್ದರು. ವಿಚಾರಗೋಷ್ಠಿಗಳಿಗೆ ಜನರು ಬರುತ್ತಿದ್ದಾರೆ. ಆದರೆ ಆಸಕ್ತಿ ಮತ್ತು ಶ್ರದ್ಧೆಯಿಂದ ಕೇಳಿಸಿಕೊಳ್ಳುವವರ ಸಂಖ್ಯೆ ತೀರಾ ವಿರಳವಾಗಿತ್ತು.

ಸರಿಯಾಗಿ ಅರ್ಥೈಸಿ: ವಿದ್ವಾಂಸ ಡಾ.ಬಸವರಾಜ ಸಬರದ `ನವ ವಸಾಹತೀಕರಣ ಮತ್ತು ವಚನ ಸಾಹಿತ್ಯ: ಹೊಸ ಓದು' ಕುರಿತು ಮಾತನಾಡಿ,  `ಈ ವಿಷಯ ಕುರಿತು ಮಾತನಾಡುವುದು ಕಷ್ಟ. ಏಕೆಂದರೆ ಜನರು ಈ ಬಗ್ಗೆ ತುಂಬಾ ಕೇಳಿಬಿಟ್ಟಿದ್ದಾರೆ. ಒಮ್ಮೆ ಜಾಗತೀಕರಣ ವಿಚಾರ ಕುರಿತು ಪ್ರಬಂಧ ಮಂಡಿಸಲು ಹೋದಾಗ ಸಭಿಕರಲ್ಲಿ ಒಬ್ಬ ಎದ್ದು ನಿಂತು ನೀವು ಜಾಗತೀಕರಣದ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಬೇಕು ಎಂದು ಆಗ್ರಹಿಸಿದ. ಆಗ ನಾನು ದೇಸೀಕರಣ ಎಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚುವುದು, ಜಾಗತೀಕರಣ ಎಂದರೆ ಮತ್ತೊಬ್ಬರ ಹಾಸಿಗೆಯಲ್ಲಿ ಮಲಗುವುದು ಎಂದು ಹೇಳಿದೆ' ಎಂದರು. ಆಗ ಸಭಿಕರು ಕೇಕೆ ಹಾಕಿದರು. ಆನಂತರದಲ್ಲಿ ಪ್ರತಿಕ್ರಿಯೆ ಬರಲೇ ಇಲ್ಲ.

`ಸ್ತ್ರೀವಾದಿಗಳು ಶರಣರ ವಚನಗಳನ್ನು ಅರ್ಥೈಸುವಲ್ಲಿ ದಾರಿ ತಪ್ಪಿದ್ದಾರೆ' ಎಂದು ಸಬರದ ಅಭಿಪ್ರಾಯಪಟ್ಟರು. `ಕರ್ನಾಟಕದಲ್ಲಿ ಸ್ತ್ರೀವಾದ ದೊಡ್ಡದಾಗಿ ಬೆಳೆದಿದೆ. ಅನೇಕ ಸ್ತ್ರೀವಾದಿಗಳು ಹಲವು ಸೈದ್ಧಾಂತಿಕ ನಿಲುವುಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಆದರೆ ಶರಣರು ಮಹಿಳೆಯರ ಬಗೆಗೆ ಯಾವ ನಿಲುವು ತಾಳಿದರು ಎನ್ನುವುದನ್ನು ತಿಳಿಯುವಲ್ಲಿ ನಮ್ಮ ಸ್ತ್ರೀವಾದಿಗಳು ಎಡವಿದ್ದಾರೆ. ವಚನಗಳನ್ನು ಅರ್ಥೈಸುವಲ್ಲಿಯೂ ತಪ್ಪಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

`ಅಲ್ಲಮ ತನ್ನ ವಚನದಲ್ಲಿ “ಪದವ ಹೇಳಬಹುದೇ ಹೊರತು ಪದಾರ್ಥವನ್ನು ಹೇಳಲು ಆಗುವುದೇನಯ್ಯ” ಎಂದು ಕೇಳುತ್ತಾರೆ. ಪದಕ್ಕೆ ಒಂದೇ ಅರ್ಥ ಇರುವುದಿಲ್ಲ.  ಪ್ರತಿಯೊಂದು ಪದಕ್ಕೂ ಮೂರ‌್ನಾಲ್ಕು ಅರ್ಥಗಳು ಇರುತ್ತವೆ. ಹೆಚ್ಚಿನವರು ಪದದ ಮೊದಲ ಅರ್ಥವನ್ನು ಮಾತ್ರ ಗ್ರಹಿಸುತ್ತಾರೆ. ಉಳಿದ  ಅರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಾಗಿಯೇ ಶರಣರ ವಚನಗಳನ್ನು ಸ್ತ್ರೀವಾದಿಗಳು ತಪ್ಪಾಗಿ ಅರಿಯುತ್ತಾರೆ.

ಬಸವಣ್ಣ ಮಹಿಳೆಯ ಬಗ್ಗೆ ತಮ್ಮ ವಚನಗಳಲ್ಲಿ ಚಾಂಡಾಳಗಿತ್ತಿ, ಸೂಳೆ ಎಂದು ಬರೆದಿದ್ದಾರೆ ಎಂದು ಸ್ತ್ರೀವಾದಿ ಲೇಖಕಿಯರು ಲೇಖನ ಬರೆಯುತ್ತಾರೆ. ಬಸವಣ್ಣ ಈ ಪದಗಳು ಮಹಿಳೆಯರು ಕುರಿತಾಗಿ ಬಳಸಿದ್ದಲ್ಲ, ಶರಣ ಸತಿಯು ತನಗೆ ತಾನೇ ಹೇಳಿಕೊಂಡ ಮಾತುಗಳಾಗಿವೆ' ಎಂದು ಸ್ಪಷ್ಟಪಡಿಸಿದರು.

`ವಚನ ಸಾಹಿತ್ಯದಲ್ಲಿ ಸ್ತ್ರೀವಾದಿ ಓದು ಎಂದರೆ ವಚನ ಸಾಹಿತ್ಯವನ್ನು ಸಂಪೂರ್ಣವಾಗಿ ಓದುವುದೇ ಆಗಿದೆ. ಇಲ್ಲದೇ ಹೋದರೆ ಸ್ತ್ರೀವಾದಿಗಳು ಕೆಲವು ವಚನಗಳನ್ನು ಓದಿ, ಅವುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿಕೊಳ್ಳುವ, ವ್ಯಾಖ್ಯಾನಿಸುವ, ಗ್ರಹಿಸುವ ಅಪಾಯವಿದೆ' ಎಂದು ಆತಂಕ ವ್ಯಕ್ತಪಡಿಸಿದರು. `ಶರಣರು ಮಹಿಳೆಯರಿಗೆ ಸಮಾನತೆ ಕೊಟ್ಟಿದ್ದರು.

11 ನೇ ಶತಮಾನದಲ್ಲಿ ಶರಣರು ವರ್ಗ ಸಮಾನತೆ, ಜಾತಿ ಸಮಾನತೆ, ಲಿಂಗ ಸಮಾನತೆ ಬಗ್ಗೆ ಮಾತನಾಡಿದ್ದಾರೆ. ಆದರೆ 21 ನೇ ಶತಮಾನದಲ್ಲಿಯೂ ಮಹಿಳೆಯರು ಮನೆ ಹೊಸ್ತಿಲು ದಾಟಿ ಹೊರಗಿ ಬರಲು ಸಾಧ್ಯವಾಗುತ್ತಿಲ್ಲ' ಎಂದು ನೆನಪಿಸಿದರು.

ಆಶಯ ನುಡಿಯನ್ನಾಡಿದ ಕವಯತ್ರಿ ಡಾ.ವೀಣಾ ಬನ್ನಂಜೆ ಅವರು, ಅಕ್ಕಮಹಾದೇವಿ, ಬಸವಣ್ಣ ಸೇರಿದಂತೆ ಶರಣರ ವಚನಗಳು, ಅಧ್ಯಾತ್ಮ, ಮಹಿಳೆ, ಪುರುಷ, ಪ್ರಕೃತಿ ಇತ್ಯಾದಿ ವಿಷಯಗಳನ್ನು  ಪ್ರಸ್ತಾಪಿಸಿದರು. ಆಗ ಸಭಿಕರು ಸಮ್ಮನೆ ಕುಳಿತಿದ್ದರು. ಪುರುಷರ ಬಗ್ಗೆ ವಿಷಯ ಪ್ರಸ್ತಾಪಿಸಿದ ವೀಣಾ ಅವರು `ಗಂಡಿಗೆ ಮಗು ಮಾಡುವುದು ಗೊತ್ತೇ ಹೊರತು, ಮಗು ಆಗುವುದು ತಿಳಿದಿಲ್ಲ' ಎಂದಾಗ ಚಪ್ಪಾಳೆ, ಕೇಕೆಯ ಪ್ರತಿಸ್ಪಂದನೆ ಸಿಕ್ಕಿತು.

`ಪ್ರತಿ ಹೆಣ್ಣು ಆಕೆ ಮಗುವನ್ನು ಹಡೆಯಲಿ, ಹಡೆಯದೇ ಇರಲಿ, ಸಹಜವಾಗಿಯೇ ಆಕೆ ತಾಯಿ ಆಗಿರುತ್ತಾಳೆ. ಹೆಣ್ಣಿನಲ್ಲಿ ಪ್ರಕೃತಿ ಇಂತಹ ಗುಣವನ್ನು ತುಂಬಿದೆ. ಗಂಡಿಗೆ ತಾಯ್ತನ ಇರುವುದಿಲ್ಲ. ಆದ್ದರಿಂದ ಪುರುಷರಿಗೆ ಮಗು ಮಾಡುವುದು ಗೊತ್ತೇ ಹೊರತು ಮಗು ಆಗುವುದು ತಿಳಿದಿಲ್ಲ. ಈ ಕಾರಣದಿಂದ ಆಧ್ಯಾತ್ಮಿಕ ಕ್ಷೇತ್ರದ ದಾರ್ಶನಿಕರು ಪತ್ನಿಯರಲ್ಲಿ ತಾಯಿಯನ್ನು ಕಾಣುತ್ತಾರೆ. ರಾಮಕೃಷ್ಣ ಪರಮಹಂಸರು ಶಾರದಾದೇವಿಯಲ್ಲಿ, ರಮಣ ಮಹರ್ಷಿ ಅಜ್ಜಿಯಲ್ಲಿ ರಜನೀಶ್ ಮಾಪ್ರೇಮಾ ಅವರಲ್ಲಿ ತಾಯಿಯನ್ನು ಕಂಡರು' ಎಂದು ತಿಳಿಸಿದರು.

`ಮಹಿಳೆ ಸ್ವಯಂ ಪರಿಪೂರ್ಣಳು. ಆದ್ದರಿಂದಲೇ ಆಕೆಗೆ ವಾರಸುದಾರರು ಇರುವುದಿಲ್ಲ. ಆದರೆ ಪುರುಷ ಪರಿಪೂರ್ಣ ಆಗಿರುವುದಿಲ್ಲ. ಹೀಗಾಗಿ ಪುರುಷ ಗಂಡು ಮಗು ಹುಟ್ಟಿದಾಗ ತನ್ನ ವಂಶವನ್ನು ಮುಂದುವರಿಸುವ ವಾರಸುದಾರ ಸಿಕ್ಕಿದ ಎಂದು ಸಂಭ್ರಮಿಸುತ್ತಾನೆ. ಈ ಮೂಲಕ ಪರಿಪೂರ್ಣ ಆಗಲು ಯತ್ನಿಸುತ್ತಾನೆ' ಎಂದು ಪ್ರತಿಪಾದಿಸಿದರು.

`ಅಕ್ಕಮಹಾದೇವಿ ಅಂತರಂಗ ಮತ್ತು ಬಹಿರಂಗಗಳ ನಡುವೆ ಭೇದಭಾವ ಮಾಡಲಿಲ್ಲ. ಆಕೆಗೆ ಒಳಗು ಮತ್ತು ಹೊರಗು ಎರಡೂ ಒಂದೇ ಆಗಿದ್ದವು. ಚಿಕ್ಕವರಾಗಿದ್ದಾಗ ನಮ್ಮ ಅಂತರಂಗದ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಬೇಕು. ಆಗ ನಮ್ಮಳಗಿನ ಮಾತು ದೊಡ್ಡದಾಗುತ್ತಾ ಹೋಗುತ್ತದೆ. ಅಕ್ಕಮಹಾದೇವಿ, ಬಸವಣ್ಣ ಅಂತರಂಗದ ಮಾತಿಗೆ ಕಿವಿಗೊಟ್ಟಿದ್ದರು' ಎಂದರು.

ಗೋಷ್ಠಿಯಲ್ಲಿ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, `ವಚನ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು', ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ `ವಚನ ಸಾಹಿತ್ಯದಲ್ಲಿ ಬಹುಮುಖ ನೆಲೆಗಳು' ವಿಷಯ ಕುರಿತು ಪ್ರಬಂಧ ಮಂಡಿಸಬೇಕಿತ್ತು. ಆದರೆ ಇವರು ಗೈರು ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.