ADVERTISEMENT

ಗಡ್ಕರಿಗೆ ಯಡಿಯೂರಪ್ಪ ಪಟ್ಟು, ಬಿಗಡಾಯಿಸಿದ ಬಿಜೆಪಿ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 8:50 IST
Last Updated 24 ಫೆಬ್ರುವರಿ 2012, 8:50 IST

ಬೆಂಗಳೂರು (ಪಿಟಿಐ):  ಫೆಬ್ರುವರಿ 27ರ ಗಡುವಿನ ಒಳಗೆ ತಮಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂಬುದಾಗಿ ಮಾಜಿ ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ ಅವರ ಪಟ್ಟು ಹಾಗೂ ಹಾಲಿ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಬದಲಾಯಿಸುವ ಪ್ರಶ್ನೆಯಿಲ್ಲ ಎಂಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ನಿಲುವಿನೊಂದಿಗೆ ಬಿಜೆಪಿಯ ಕರ್ನಾಟಕ ಘಟಕದ ಬಿಕ್ಕಟ್ಟು ಶುಕ್ರವಾರ ಇನ್ನಷ್ಟು ಬಿಗಡಾಯಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಲೋಕಾಯುಕ್ತ ವರದಿಯ ದೋಷಾರೋಪಣೆ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಯಡಿಯೂರಪ್ಪ ಅವರು ~ತಾವು ಇನ್ನಷ್ಟು ಕಾಯಲು ಸಿದ್ಧರಿಲ್ಲ~ ಎಂಬುದಾಗಿ ಪಕ್ಷದ ಮುಖ್ಯಸ್ಥರಿಗೆ ಸ್ಪಷ್ಟ ಪಡಿಸಿದ್ದಾರೆ.

ಬಿಜೆಪಿಯ ~ಚಿಂತನ- ಮಂಥನ~ ಸಭೆಗಿಂತ ಮೊದಲೇ ಗಡ್ಡರಿ ಅವರು ಶುಕ್ರವಾರ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ~ಸಂಧಾನ ಸಾಧ್ಯತೆ~ ಬಗ್ಗೆ ಚರ್ಚಿಸಿದರು.
ಸದಾನಂದ ಗೌಡ ಅವರನ್ನು ಬದಲಾಯಿಸಬೇಕು ಎಂಬ ತನ್ನ ನಿಲುವಿಗೆ ಯಡಿಯೂರಪ್ಪ ಅವರು ಬಲವಾಗಿ ಅಂಟಿಕೊಂಡರು ಎಂದು ಮೂಲಗಳು ಹೇಳಿವೆ.

ಕರ್ನಾಟಕ ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಧಿಕಾರ ತ್ಯಜಿಸಬೇಕಾಗಿ ಬಂದಾಗ ಯಡಿಯೂರಪ್ಪ ಅವರೇ ಆಯ್ಕೆ ಮಾಡಿದ್ದ ಸದಾನಂದ ಗೌಡ ಈಗ ಯಡಿಯೂರಪ್ಪ ಅವರಿಂದ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಕರ್ನಾಟಕ ಘಟಕದಲ್ಲಿ  ಒಡಕು ಉಂಟಾಗುವುದು ಪಕ್ಷದ ವರಿಷ್ಠರಿಗೆ ಇಷ್ಟವಿಲ್ಲ. ಹೀಗಾಗಿ ಯಡಿಯೂರಪ್ಪ ಅವರನ್ನು ಸಂತೈಸಲು ವರಿಷ್ಠರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದಾಗ ಕೇಂದ್ರ ನಾಯಕರಾದ ಅರುಣ್ ಜೇಟ್ಲಿ ಮತ್ತು ಎಂ. ವೆಂಕಯ್ಯ ನಾಯ್ಡು ಅವರಿಗೆ ಶಾಂತಿಯುತವಾಗಿ ವಿಷಯವನ್ನು ಇತ್ಯರ್ಥ ಪಡಿಸುವ ಹೊಣೆಗಾರಿಕೆ ವಹಿಸಲಾಗಿತ್ತು.

ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ತರಲು ವರಿಷ್ಠರು ಆಸಕ್ತಿ ವಹಿಸುತ್ತಿಲ್ಲವಾದ ಕಾರಣ ಪಕ್ಷದ ಹಾಲಿ ಬಿಕ್ಕಟ್ಟಿನ ಪರಿಣಾಮ ಏನಾಗುತ್ತದೆ ಎಂಬುದರ ಸ್ಪಷ್ಟ ಚಿತ್ರಣ ಕಾಣುತ್ತಿಲ್ಲ. ಏನಿದ್ದರೂ ಬಿಜೆಪಿಗೆ ನಿಷ್ಠವಾಗಿರುವ ಲಿಂಗಾಯತ ಸಮುದಾಯದ ಮೇಲೆ ಯಡಿಯೂರಪ್ಪ ಅವರಿಗೆ ಇರುವ ಹಿಡಿತ ಹಾಗೂ ಕರ್ನಾಟಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಪಕ್ಷವನ್ನು ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಎಂಬ ವಾಸ್ತವ ಸಂಗತಿ ಅವರ ~ತೂಕ~ವನ್ನು ಹೆಚ್ಚಿಸಿದೆ.

ತಮ್ಮ ವಿರೋಧಿ ವಲಯದಲ್ಲಿ ಗುರುತಿಸಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಅವರಂತಹವನ್ನು ತಮ್ಮ ಗೆಳೆಯರನ್ನಾಗಿ ಯಡಿಯೂರಪ್ಪ ಅವರು ಪರಿವರ್ತಿಸಿಕೊಂಡಿರುವುದು ಕೂಡಾ ವರಿಷ್ಠರ ತಲೆನೋವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.