ADVERTISEMENT

ಗಣಪತಿ ತಂಗಿಯಿಂದ ಸಿಬಿಐ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 19:30 IST
Last Updated 15 ನವೆಂಬರ್ 2017, 19:30 IST
ಗಣಪತಿ ತಂಗಿಯಿಂದ ಸಿಬಿಐ ಮಾಹಿತಿ ಸಂಗ್ರಹ
ಗಣಪತಿ ತಂಗಿಯಿಂದ ಸಿಬಿಐ ಮಾಹಿತಿ ಸಂಗ್ರಹ   

ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಗಣಪತಿ ತಂಗಿ ಸಬಿತಾ ಅವರಿಂದ  ಬುಧವಾರ ಮಾಹಿತಿ ಸಂಗ್ರಹಿಸಿದರು.

ನಗರದ ಸಿಬಿಐ ಕಚೇರಿಗೆ ಹಾಜರಾಗಿದ್ದ ಸಬಿತಾ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಸಿಬಿಐ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.

‘ಸಬಿತಾ ಜೊತೆಗೆ ಗಣಪತಿ ಏನೆಲ್ಲ ಸಂಕಟಗಳನ್ನು ಹಂಚಿಕೊಂಡಿದ್ದರು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ’ ಎಂದು ಸಿಬಿಐ ಮೂಲಗಳು ತಿಳಿಸಿವೆ.

ADVERTISEMENT

‘ಗಣಪತಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಯಾವ ರೀತಿಯ ಕಿರುಕುಳ ಇತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಿಮ್ಮ ಬಳಿ ಏನಾದರೂ ಹೇಳಿಕೊಂಡಿದ್ದರೆ, ಖಾಸಗಿ ಸುದ್ದಿ ವಾಹಿನಿಗೆ ಕೊಟ್ಟಿರುವ ಸಂದರ್ಶನದ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಸಚಿವ ಕೆ.ಜೆ. ಜಾರ್ಜ್, ‌ಐಪಿಎಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣವ್ ಮೊಹಂತಿ ಕಿರುಕುಳ ನೀಡಿದ್ದರ ಬಗ್ಗೆ ಪೂರಕ ದಾಖಲೆಗಳಿದ್ದರೆ ಒದಗಿಸುವಂತೆ ತಿಳಿಸಲಾಗಿದೆ’ ಎಂದೂ ಮೂಲಗಳು ವಿವರಿಸಿವೆ.

ಸಿಬಿಐ ಎಫ್‌ಐಆರ್ ದಾಖಲಿಸಿದ ಮರುದಿನವೇ ಗಣಪತಿ ತಂದೆ ಕುಶಾಲಪ್ಪ, ತಂಗಿ ಸಬಿತಾ ಮತ್ತು ತಮ್ಮ ಮಾಚಯ್ಯ ಅವರಿಂದ ಸಿಬಿಐ ಅಧಿಕಾರಿಗಳು ಹೇಳಿಕೆ ಪಡೆದಿದ್ದರು.

‘ಈ ಹಿಂದೆ ನೀಡಿದ್ದ ಮಾಹಿತಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ಅಧಿಕಾರಿಗಳು ಕೇಳಿದ್ದರು. ನೀಡಲು ಬಂದಿದ್ದೇನೆ’ ಎಂದು ಸಬಿತಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.