ADVERTISEMENT

ಗಣಿ, ಗಡಿ ಅಕ್ರಮ: ತಪಾಸಣೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2010, 6:20 IST
Last Updated 23 ಡಿಸೆಂಬರ್ 2010, 6:20 IST

ಬಳ್ಳಾರಿ: ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಲ್ಲದೆ, ಗಡಿ ಒತ್ತುವರಿ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ, ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ಸದಸ್ಯರು ಬುಧವಾರ ಅಂತರರಾಜ್ಯ ಗಡಿಯ ಕಾಯ್ದಿಟ್ಟ ಅರಣ್ಯದಲ್ಲಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದರು.

ಸಮಾಜ ಪರಿವರ್ತನ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಆಂಧ್ರಪ್ರದೇಶ ಸರ್ಕಾರದ ಅರ್ಜಿಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ನ ಅರಣ್ಯ ಪೀಠವು ಇದೇ ನವೆಂಬರ್ 19ರಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉನ್ನತಾಧಿಕಾರಿ ಸಮಿತಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ಪರಿಶೀಲನೆ ಕಾರ್ಯ ಆರಂಭಿಸಲಾಗಿದೆ. ಸಮಿತಿ ಸದಸ್ಯರಾದ ಎಂ.ಕೆ. ಜೀವರಾಜ್ಕಾ, ಮಹೇಂದ್ರ ವ್ಯಾಸ್, ಎ.ಡಿ.ಎನ್. ರಾಜು, ಪಿ.ವಿ. ಜಯಕೃಷ್ಣನ್, ಆಂಧ್ರದ ಅರಣ್ಯಾಧಿಕಾರಿ ಸಮ್ಮರೆಡ್ಡಿ ಮತ್ತಿತರರು ಅಂತರಗಂಗಮ್ಮ ಕೊಂಡ ಮೈನ್ಸ್, ವೈ.ಎಂ. ಅಂಡ್ ಸನ್ಸ್‌ಗೆ ಸೇರಿದ ಗಣಿ ಪ್ರದೇಶದಲ್ಲಿ  ಐದು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಉನ್ನತಾಧಿಕಾರ ಸಮಿತಿಯು ಗುರುವಾರವೂ ವಿವಾದಿತ ಪ್ರದೇಶದ ಪರಿಶೀಲನೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ. ಮಂಗಳವಾರ ಆಂಧ್ರದ ಅನಂತಪುರದಲ್ಲಿ ಸಭೆ ಸೇರಿಅಧಿಕಾರಿಗಳೊಂದಿಗೆ ಈ ಸಮಿತಿ ಚರ್ಚಿಸಿತ್ತು.

ಕರ್ನಾಟಕ- ಆಂಧ್ರಪ್ರದೇಶದ ಗಡಿಯ ಓಬಳಾಪುರಂ ಬಳಿ ಇರುವ ರೆಡ್ಡಿ ಸಹೋದರರ ಮಾಲೀಕತ್ವದ ಬಳ್ಳಾರಿ ಐರನ್ ಓರ್ ಪ್ರೈ ಲಿ, (ಬಿಐಒಪಿ), ವೈ.ಎಂ. ಅಂಡ್ ಸನ್ಸ್ ಮತ್ತು ಓಎಂಸಿ-1 (25.98 ಹೆಕ್ಟೇರ್) ಹಾಗೂ ಅಂತರಗಂಗಮ್ಮ ಕೊಂಡ ಮೈನ್ಸ್ (ಎಜಿಕೆ), ಅನಂತಪುರ ಮೈನ್ಸ್‌ಗಳ ಗಣಿ ಗುತ್ತಿಗೆ ಪ್ರದೇಶದಲ್ಲಿ 10 ಎಕರೆ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿದ್ದರ ಬಗ್ಗೆ ಮಾಹಿತಿ ಪಡೆಯಬೇಕು.

ಅರಣ್ಯಾಧಿಕಾರಿ ಸಮ್ಮ ರೆಡ್ಡಿ ನೇತೃತ್ವದ ತ್ರಿಸದಸ್ಯ ಸಮಿತಿ 2009 ನವೆಂಬರ್ 20ರಂದು ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ ಗಡಿ ಗುರುತು (ಸುಗ್ಗಲಮ್ಮ ದೇವಸ್ಥಾನ) ನಾಶವಾಗಿದ್ದು, ಈ ಕುರಿತಾದ ಸಮಗ್ರ ವಿವರ ಸಂಗ್ರಹಿಸಬೇಕು.

ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಅದಿರು ಸಂಗ್ರಹದಿಂದ ಪರಿಸರದ ಮೇಲಾಗುವ ಪರಿಣಾಮ, ಅಕ್ರಮ ಅದಿರು ಸಂಗ್ರಹ, ಗುತ್ತಿಗೆ ನಿಯಮಗಳ ಉಲ್ಲಂಘನೆಗಳಿಗೆ ಸಂಬಂಧಿಸಿದ ವಿವರ ಪಡೆಯಬೇಕು. ಅದಿರಿನ ಲಭ್ಯತೆ, ಉಭಯ ರಾಜ್ಯದಲ್ಲಿ ಸಾಗಣೆಯಾದ, ಆಗುತ್ತಿರುವ ಅದಿರು ಪ್ರಮಾಣದ ಬಗ್ಗೆ ಮಾಹಿತಿ ಪಡೆಯಬೇಕು. ವಿವಾದಿತ ಗಡಿಭಾಗದಲ್ಲಿ ಅಕ್ರಮ ಗಣಿಗಾರಿಕೆ, ಅದಿರು ಸಾಗಣೆ ತಡೆಯಲು ಕ್ರಮ ಕೈಗೊಳ್ಳಬೇಕು.

ವಿವಾದಿತ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧ, ಜಂಟಿ ಸಮೀಕ್ಷಾ ಸಮಿತಿಯ ವರದಿ ತಿರಸ್ಕರಿಸಿ ಕೇಂದ್ರ ಉನ್ನತಾಧಿಕಾರಿ ಸಮಿತಿ ಮತ್ತು ರಾಜ್ಯ ಲೋಕಾಯುಕ್ತ ಅಧಿಕಾರಿಗಳಿಂದ ಅಕ್ರಮ ಗಣಿಗಾರಿಕೆ ಕುರಿತು ಸರ್ವೆ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.