ADVERTISEMENT

ಗರ್ಭಾ ನೃತ್ಯಕ್ಕೆ ಹೆಜ್ಜೆ ಹಾಕಿದ ರಾಜ್ಯಪಾಲರು

ಶ್ರವಣಬೆಳಗೊಳದಲ್ಲಿ ಚಾತುರ್ಮಾಸ ಮಂಗಲ ಕಳಶ ಸ್ಥಾಪನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 19:55 IST
Last Updated 7 ಜುಲೈ 2017, 19:55 IST
ಶ್ರವಣಬೆಳಗೊಳದಲ್ಲಿ ಶುಕ್ರವಾರ ನಡೆದ ಚಾತುರ್ಮಾಸ ಮಂಗಲ ಕಳಶ ಸ್ಥಾಪನಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಗರ್ಭಾ ನೃತ್ಯಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಹೆಜ್ಜೆ ಹಾಕಿದರು
ಶ್ರವಣಬೆಳಗೊಳದಲ್ಲಿ ಶುಕ್ರವಾರ ನಡೆದ ಚಾತುರ್ಮಾಸ ಮಂಗಲ ಕಳಶ ಸ್ಥಾಪನಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಗರ್ಭಾ ನೃತ್ಯಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಹೆಜ್ಜೆ ಹಾಕಿದರು   

ಶ್ರವಣಬೆಳಗೊಳ: ಶ್ರೀಕ್ಷೇತ್ರದಲ್ಲಿ ಶುಕ್ರವಾರ ನಡೆದ ಚಾತುರ್ಮಾಸ ಮಂಗಲ ಕಳಸ ಸ್ಥಾಪನಾ ಸಮಾರಂಭದಲ್ಲಿ ಗರ್ಭಾ ನೃತ್ಯಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಹೆಜ್ಜೆ ಹಾಕಿದರು.

ಚಾವುಂಡರಾಯ ಸಭಾಂಗಣದಲ್ಲಿ ರಾಜ್ಯಪಾಲರು ಕಳಶ ಸ್ಥಾಪನಾ ಮಹೋತ್ಸವ ಉದ್ಘಾಟಿಸಿದಾಗ ಕಲಾವಿದರು ಗರ್ಭಾ ನೃತ್ಯ ಆರಂಭಿಸಿದರು. ಇದನ್ನು ನೋಡಿದ ಅವರು, ವೇದಿಕೆಯಿಂದ ಇಳಿದು ನೃತ್ಯ ಮಾಡುತ್ತಿದ್ದ ಕಲಾವಿದರ ಗುಂಪಿನತ್ತ ತೆರಳಿ ಅವರೊಂದಿಗೆ ಕೆಲ ನಿಮಿಷ ಹೆಜ್ಜೆ ಹಾಕಿದರು.

ನಂತರ ಮಾತನಾಡಿದ ರಾಜ್ಯಪಾಲರು, ‘ತ್ಯಾಗದಿಂದ ಸುಖವಿದೆ ಎಂಬುದನ್ನು ಜೈನ ಧರ್ಮದಿಂದ ಕಲಿಯಬೇಕು. ಮಹಾವೀರರ ತತ್ವಗಳ ಪಾಲನೆಯಿಂದ ಉತ್ತಮ ಸಮಾಜ ನಿರ್ಮಿಸಬಹುದು. ಮಹಾತ್ಮ ಗಾಂಧೀಜಿ ಜೈನ ಧರ್ಮದ ಪ್ರೇರಣೆಯಿಂದ ಅಹಿಂಸಾ ಮಾರ್ಗದಿಂದ ಹೋರಾಟ ಮಾಡಿದರು. ಇದು, ದೇಶ ಸ್ವಾತಂತ್ರ್ಯ ಗಳಿಸಲು ನೆರವಾಯಿತು’ ಎಂದು ಹೇಳಿದರು.

‘ಜೀವನದಲ್ಲಿ ಎಷ್ಟು ಬೇಕೋ ಅಷ್ಟು ಹಣವನ್ನು ಸಂಪಾದಿಸಬೇಕು. ಅದರಲ್ಲಿ ಸ್ವಲ್ಪವನ್ನಾದರೂ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು. ಮಾತೃ ಶಕ್ತಿಯೇ ದೇಶದ ಶಕ್ತಿ. ತಂದೆಯಿಂದ ವೀರತ್ವ ಮತ್ತು ತಾಯಿಯಿಂದ ಸಂಸ್ಕಾರ ಬರುತ್ತದೆ. ತಾಯಿ ಶಕ್ತಿಗೆ ಅಪಮಾನ ಮಾಡಬಾರದು’ ಎಂದು ತಿಳಿಸಿದರು.

ಸಾಹಿತಿ ಡಾ.ಹಂಪ ನಾಗರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಧಮಾನ ಸಾಗರ ಮಹಾರಾಜ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹೋತ್ಸವ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.