ADVERTISEMENT

ಗುಲ್ಬರ್ಗಕ್ಕೆ ವಿಮಾನ ಬಿಡಿಭಾಗ ತಯಾರಿಕಾ ಕಾರ್ಖಾನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಗುಲ್ಬರ್ಗ: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ತರಬೇತಿ ಕೇಂದ್ರ ಹಾಗೂ ರಕ್ಷಣಾ ಇಲಾಖೆಯ ವಿಮಾನ ಬಿಡಿಭಾಗ ತಯಾರಿಕಾ ಘಟಕವನ್ನು ಗುಲ್ಬರ್ಗದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಶನಿವಾರ ಇಲ್ಲಿ ಹೇಳಿದರು.

ತಮ್ಮ ನಿವಾಸದಲ್ಲಿ ಭೇಟಿಯಾದ ಪತ್ರಕರ್ತರಿಗೆ ಈ ಕುರಿತು ವಿವರಿಸಿದ ಅವರು, `ಈ ಯೋಜನೆಗಳನ್ನು ಗುಲ್ಬರ್ಗದಲ್ಲಿ ಜಾರಿಗೊಳಿಸಲು ಸುಮಾರು 100 ಎಕರೆ ಭೂಮಿ ಅಗತ್ಯವಿದೆ. ರಾಜ್ಯ ಸರ್ಕಾರದ ಸಂಬಂಧಿಸಿದ ಸಚಿವರೊಂದಿಗೆ ಈಗಾಗಲೇ ಮಾತುಕತೆಯಾಗಿದೆ. ಯಾದಗಿರಿ- ಗುಲ್ಬರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸ್ಥಳ ಗುರುತಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿ, ಜಮೀನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ~ ಎಂದರು.

ಮೂರು ತಿಂಗಳ ಬೆಳೆಗಳಿಗಿಂತ ಆರು ತಿಂಗಳ ಬೆಳೆಯಾದ ತೊಗರಿಗೆ ಕಡಿಮೆ ಬೆಂಬಲ ನೀಡಲಾಗುತ್ತಿರುವುದು ಕೇಂದ್ರ ಕೃಷಿ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಕನಿಷ್ಠ ರೂ. 5 ಸಾವಿರ ಬೆಂಬಲ ಬೆಲೆ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.