ADVERTISEMENT

ಗೂಬೆ ಮಾರಾಟ ಯತ್ನ: ಬಂಧನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:40 IST
Last Updated 11 ಏಪ್ರಿಲ್ 2018, 19:40 IST
ಗೂಬೆ ಮಾರಾಟ ಯತ್ನ: ಬಂಧನ
ಗೂಬೆ ಮಾರಾಟ ಯತ್ನ: ಬಂಧನ   

ಹನೂರು (ಚಾಮರಾಜನಗರ): ಗೂಬೆ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಸಂಚಾರ ದಳದ ಪೊಲೀಸರು ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಬುಧವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಕಗ್ಗಲಿಗುಂದಿ ಗ್ರಾಮದ ನಿವಾಸಿಗಳಾದ ಮಾದೇಶ್, ರಂಗಸ್ವಾಮಿ ಬಂಧಿತ ಆರೋಪಿಗಳು.

ಗ್ರಾಮದಲ್ಲಿ ಬೆಳಿಗ್ಗೆ ಗೂಬೆ ಹಿಡಿದು, ಮಾರಾಟಕ್ಕಾಗಿ ಮೈಸೂರಿಗೆ ಕೊಂಡೊಯ್ಯಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಸಂಚಾರ ದಳದ ಎಎಸ್‌ಐ ಲೋಕೇಶ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ADVERTISEMENT

ವಿದ್ಯುತ್‌ ತಂತಿ ತಗುಲಿ ಯುವಕ ಸಾವು

ಲಿಂಗಸುಗೂರು (ರಾಯಚೂರು ಜಿಲ್ಲೆ): ಮಸ್ಕಿ ತಾಲ್ಲೂಕಿನ ತೆರೆಬಾವಿ–ಬುದ್ದಿನ್ನಿ ನಡುವೆ ವಿದ್ಯುತ್‌ ತಂತಿ ತಗುಲಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಯುವಕ ಮೃತಪಟ್ಟು, 13 ಬಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾವೂದ್‌ ಇಬ್ರಾಹಿಂ ಮೋದಿನಸಾಬ್ (19) ಮೃತಪಟ್ಟಿದ್ದು, ಗಾಯಗೊಂಡವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ತಾಲ್ಲೂಕಿನ ಮಟ್ಟೂರು ಗ್ರಾಮದಿಂದ ಅಮರೇಶ್ವರ ಗ್ರಾಮಕ್ಕೆ ಮದುವೆಗೆ ತೆರಳುತ್ತಿದ್ದಾಗ ಲಾರಿ ಚಾಲಕನ ನಿರ್ಲಕ್ಷ್ಯದಿಂದ ವಿದ್ಯುತ್‌ ತಂತಿ ತಗುಲಿದೆ. ಗಾಯಗೊಂಡಿರುವ ಎಲ್ಲರೂ ಮಟ್ಟೂರು ಗ್ರಾಮದವರಾಗಿದ್ದು 10 ರಿಂದ 14 ವಯಸ್ಸಿನವರಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

'ಛಂದ ಪುಸ್ತಕ' ಹಸ್ತಪ್ರತಿ ಆಹ್ವಾನ

ಬೆಂಗಳೂರು: ಯುವ ಕಥೆಗಾರರನ್ನು ಉತ್ತೇಜಿಸಲು 'ಛಂದ ಪುಸ್ತಕ' ಪ್ರಕಾಶನ ಕಥಾಸಂಕಲನಗಳ ಹಸ್ತಪ್ರತಿ ಸ್ಪರ್ಧೆ ನಡೆಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನವನ್ನು ಹೊರತಂದಿರದ ಲೇಖಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.

₹ 30 ಸಾವಿರ ಬಹುಮಾನದ ಜೊತೆಗೆ ಆಯ್ಕೆಯಾದ ಸಂಕಲನವನ್ನು ಛಂದ ಪುಸ್ತಕ ಪ್ರಕಟಿಸಲಿದೆ. 2018ರ ಜೂನ್ 10ರಂದು ಬೆಂಗಳೂರಿನಲ್ಲಿ ನಡೆಯವ ಸಮಾರಂಭದಲ್ಲಿ ವಿಜೇತ ಕೃತಿ ಬಿಡುಗಡೆಯಾಗುವುದು.

ಹಸ್ತಪ್ರತಿ ಕಳುಹಿಸಲು ಕೊನೆಯ ದಿನ ಏಪ್ರಿಲ್ 30. ವಿಳಾಸ: ಛಂದ ಪುಸ್ತಕ, ಕೇರಾಫ್ ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560 076. ಮೊಬೈಲ್‌: 98444 22782.

ಎಂಟು ಜಿಲ್ಲೆಗಳ ಕೋರ್ಟ್‌ ಕಲಾಪದ ವೇಳೆ ಬದಲು

ಬೆಂಗಳೂರು: ಬಿಸಿಲ ಬೇಗೆ ಹೆಚ್ಚುತ್ತಿರುವ ಕಾರಣ ಹೈದರಾಬಾದ್ ಕರ್ನಾಟಕದ ಆರು ಹಾಗೂ ಉತ್ತರ ಕರ್ನಾಟಕದ ಎರಡು ಜಿಲ್ಲೆಗಳ ಅಧೀನ ನ್ಯಾಯಾಲಯಗಳ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಿ ಆದೇಶಿಸಲಾಗಿದೆ.

ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಿವಿಲ್‌, ಕ್ರಿಮಿನಲ್‌, ಕೌಟುಂಬಿಕ, ಮತ್ತು ಕಾರ್ಮಿಕ ಕೋರ್ಟ್‌ಗಳ ಬದಲಾದ ಕಲಾಪದ ವೇಳೆ ಗುರುವಾರದಿಂದಲೇ (ಏ.12) ಜಾರಿಗೆ ಬರಲಿದೆ. ಇದು ಮೇ 31ರವರೆಗೆ ಜಾರಿಯಲ್ಲಿರುತ್ತದೆ.

ಈ ಕುರಿತ ಆದೇಶವನ್ನು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅಶೋಕ್ ಜಿ.ನಿಜಗಣ್ಣವರ್ ಬುಧವಾರ ಪ್ರಕಟಿಸಿದ್ದಾರೆ.

ಕಲಾಪದ ವೇಳೆ ಬೆಳಗ್ಗೆ 8ರಿಂದ ಮಧ್ಯಾಹ್ನ 11ರವರೆಗೆ. 11.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ.

ಕೋರ್ಟ್‌ನ ಕಚೇರಿಗಳು ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯನಿರ್ವಹಣೆ ಮಾಡಲಿವೆ ಎಂದು ಪ್ರಕಟಣೆ ತಿಳಿಸಿದೆ.

ಮತ ಎಣಿಕೆ ತಡೆ ಆದೇಶ ಮುಂದುವರಿಕೆ

ಬೆಂಗಳೂರು: ರಾಜ್ಯ ವಕೀಲರ ಪರಿಷತ್‌ನ 25 ಪದಾಧಿಕಾರಿಗಳ ಆಯ್ಕೆಗೆ ಕಳೆದ ತಿಂಗಳ 27ರಂದು ನಡೆದ ಚುನಾವಣೆಯ ಮತ ಎಣಿಕೆಗೆ ನೀಡಿದ್ದ ತಡೆಯಾಜ್ಞೆಯನ್ನು ಭಾರತೀಯ ವಕೀಲರ ಪರಿಷತ್‌ ಚುನಾವಣಾ ನ್ಯಾಯಮಂಡಳಿ ಮುಂದುವರಿಸಿ ಆದೇಶಿಸಿದೆ.

ಚುನಾವಣೆಗೆ ಸಂಬಂಧಿಸಿದ ತಕರಾರು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ದೆಹಲಿಯಲ್ಲಿನ ನ್ಯಾಯಮಂಡಳಿ, ‘ಇದೇ 20ರವರೆಗೆ ತಡೆಯಾಜ್ಞೆ ಜಾರಿಯಲ್ಲಿ ಇರುತ್ತದೆ ಅಂದು ಪ್ರಕರಣದ ಅಂತಿಮ ಆದೇಶ ಹೊರಡಿಸಲಾಗುವುದು’ ಎಂದು ಹೇಳಿದೆ.

ವಿಚಾರಣೆ ವೇಳೆ ಪರಿಷತ್‌ ಪರ ಹಾಜರಾಗಿದ್ದ ಚುನಾವಣಾ ಅಧಿಕಾರಿಯೂ ಆಗಿದ್ದ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಲಿಖಿತ ಆಕ್ಷೇಪಣೆ ಸಲ್ಲಿಸಿದರು.

‘ಸಮಯ ಕಡಿಮೆ ಇದ್ದ ಕಾರಣ ಚುನಾವಣೆಗೆ ಹೈಕೋರ್ಟ್ ನ್ಯಾಯಮೂರ್ತಿಯನ್ನು ವೀಕ್ಷಕರನ್ನಾಗಿ ನೇಮಕ ಮಾಡಲು ಸಾಧ್ಯವಾಗಲಿಲ್ಲ’ ಎಂದು ನ್ಯಾಯಮಂಡಳಿಗೆ ತಿಳಿಸಿದರು.

ಲಿಖಿತ ಆಕ್ಷೇಪಣೆ ಪಡೆದ ನ್ಯಾಯಮಂಡಳಿ ಅಧ್ಯಕ್ಷ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿಯೂ ಆದ ಎಸ್‌.ಕೆ.ಮುಖರ್ಜಿ, ‘ಈ ಪ್ರಕರಣದ ಅಂತಿಮ ವಿಚಾರಣೆ ಮುಗಿಯುವವರೆಗೂ ಮತ ಎಣಿಕೆಗೆ ನೀಡಲಾಗಿರುವ ತಡೆಯಾಜ್ಞೆ ಮುಂದುವರಿಯುತ್ತದೆ’ ಎಂದು ಆದೇಶಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿರುವ ವಕೀಲ ದುರ್ಗಾಪ್ರಸಾದ್ ಹಾಗೂ ಎಚ್.ಸಿ.ಶಿವರಾಮು ಈ ಅರ್ಜಿ ಸಲ್ಲಿಸಿದ್ದಾರೆ.

ಪರಿಷತ್‌ ಪರವಾಗಿ ಕಾರ್ಯದರ್ಶಿ ಬಸವರಾಜ ಹುಡೇದಗಡ್ಡಿ ಹಾಗೂ ಚುನಾವಣಾ ಉಸ್ತುವಾರಿ ಹೊತ್ತಿದ್ದ ವಕೀಲ ಶ್ರೀನಿಧಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.