ADVERTISEMENT

ಗೊಂದಲದ ಗೂಡಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಸಾಕ್ಷ್ಯಚಿತ್ರಗಳ ಪ್ರದರ್ಶನ ಬಳಿಕ ನಿರ್ದೇಶಕರಾದ ಟಿ.ಎನ್. ಸೀತಾರಾಂ, ಗಿರೀಶ್ ಕಾಸರವಳ್ಳಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದರು. ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಜರಿದ್ದರು –ಪ್ರಜಾವಾಣಿ ಚಿತ್ರ
ಸಾಕ್ಷ್ಯಚಿತ್ರಗಳ ಪ್ರದರ್ಶನ ಬಳಿಕ ನಿರ್ದೇಶಕರಾದ ಟಿ.ಎನ್. ಸೀತಾರಾಂ, ಗಿರೀಶ್ ಕಾಸರವಳ್ಳಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದರು. ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಜ್ರ ಮಹೋತ್ಸವ ವೆಚ್ಚ ಕಡಿತಗೊಳಿಸಿದ್ದರಿಂದ ಅರ್ಧಂಬರ್ಧ ತಯಾರಾದ ಸಾಕ್ಷ್ಯಚಿತ್ರಗಳನ್ನು ಎರಡೆರಡು ಸಲ ಪ್ರದರ್ಶಿಸಿದ ಪ್ರಸಂಗಕ್ಕೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ ಬುಧವಾರ ಸಾಕ್ಷಿಯಾಯಿತು.

ಟಿ.ಎನ್. ಸೀತಾರಾಂ ನಿರ್ದೇಶನದ ‘ಕರ್ನಾಟಕ ವಿಧಾನ ಮಂಡಲ ನಡೆದು ಬಂದ ದಾರಿ’ ಮತ್ತು ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ವಿಧಾನಸೌಧ ಕಟ್ಟಡ ನಿರ್ಮಾಣ’ ಸಾಕ್ಷ್ಯಚಿತ್ರ ಪ್ರದರ್ಶನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮಧ್ಯಾಹ್ನ 3ರಿಂದ ನಡೆಯಲಿದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಹಾಕಲಾಗಿತ್ತು. ಆದರೆ, ಮಧ್ಯಾಹ್ನ 1.45ರಿಂದಲೇ ಪ್ರದರ್ಶನ ಪ್ರಾರಂಭಿಸಿ 3.30ರ ವೇಳೆಗೆ ಎರಡೂ ಚಿತ್ರಗಳ ಪ್ರದರ್ಶನ ಮುಗಿಸಲಾಯಿತು.

‘ನೀವು ಹೇಳಿದ ಸಮಯಕ್ಕೆ ಬಂದರೂ ಚಿತ್ರ ವೀಕ್ಷಣೆಗೆ ಅವಕಾಶ ಸಿಗಲಿಲ್ಲ’ ಎಂದು ಅನೇಕ ಅತಿಥಿಗಳು ಸಂಘಟಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದಾಗಿ ಎರಡೂ ಚಿತ್ರಗಳನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು. ನಿರ್ದೇಶಕ ಸೀತಾರಾಂ ಅವರಿಗೂ ಅವರ ಸಾಕ್ಷ್ಯಚಿತ್ರ ವೀಕ್ಷಿಸುವ ಭಾಗ್ಯ ಸಿಗಲಿಲ್ಲ.

ADVERTISEMENT

‘ನನ್ನ ಚಿತ್ರ ಪ್ರದರ್ಶನದ ಸಮಯ ಕುರಿತು ನನಗೇ ಸರಿಯಾದ ಮಾಹಿತಿ ಇರಲಿಲ್ಲ. ಪ್ರದರ್ಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಬೆನ್ನು ತಟ್ಟಿ ಶಹಬ್ಬಾಸ್‌ ಎಂದರು. ನಾನು ಬರುವ ಹೊತ್ತಿಗೆ ಪ್ರದರ್ಶನ ಮುಗಿದಿತ್ತು’  ಎಂದು ಸೀತಾರಾಂ ಮಾಧ್ಯಮದವರ ಮುಂದೆ ಬೇಸರ ವ್ಯಕ್ತಪಡಿಸಿದರು.

’ನೀವು ನಿರ್ಮಿಸಿದ ಚಿತ್ರಕ್ಕೆ ಸರ್ಕಾರ ವೆಚ್ಚ ಕಡಿತ ಮಾಡಿದೆಯಲ್ಲಾ’ ಎಂಬ  ಪ್ರಶ್ನೆಗೆ, ‘ಈ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ. ಕರ್ನಾಟಕ ವಿಧಾನ ಮಂಡಲ ನಡೆದು ಬಂದ ದಾರಿ ಕುರಿತು ಏಳು ಭಾಗಗಳನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಎರಡು ಭಾಗ ಮಾತ್ರ ಪೂರ್ಣಗೊಂಡಿದೆ. ಅಷ್ಟನ್ನೇ ಸರ್ಕಾರಕ್ಕೆ ನೀಡಿದ್ದೇನೆ’ ಎಂದರು.

ಕಿಶನ್‌ಗೂ ಮಾಹಿತಿ ಇಲ್ಲ: ಇದೇ ಸಂದರ್ಭದಲ್ಲಿ, ಮಾಸ್ಟರ್ ಕಿಶನ್ ನಿರ್ದೇಶನದ ‘ವಿಧಾನಸೌಧ ಕಟ್ಟಡದ 3ಡಿ ವರ್ಚುಯಲ್ ರಿಯಾಲಿಟಿ ವಿಡಿಯೊ’ ಪ್ರದರ್ಶನ ಇತ್ತಾದರೂ ನಡೆಯಲಿಲ್ಲ. ‘ವಿಡಿಯೊ ಪ್ರದರ್ಶನದ ವೇಳೆ ಬಗ್ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಪೆನ್‌ಡ್ರೈವ್‌ನಲ್ಲಿ ವಿಡಿಯೊ ತಂದಿದ್ದೇನೆ. ಪ್ರದರ್ಶನಕ್ಕೆ ಈಗ ಅವಕಾಶ ಕೇಳಿದರೆ ಕೊಡಲಿಲ್ಲ’ ಎಂದು ಕಿಶನ್ ಬೇಸರ ವ್ಯಕ್ತಪಡಿಸಿದರು. ‘ಸಾಕ್ಷ್ಯಚಿತ್ರಗಳ ಪ್ರದರ್ಶನ ಸಮಯ ಕುರಿತು ಎಲ್ಲರಿಗೂ ಪತ್ರ ಮುಖೇನ ಮಾಹಿತಿ ನೀಡಲಾಗಿದೆ. ಯಾವುದೇ ಸಂವಹನ ಕೊರತೆ ಉಂಟಾಗಿಲ್ಲ’ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಸ್ಪಷ್ಟಪಡಿಸಿದರು.

ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಸಾಕ್ಷ್ಯಚಿತ್ರಗಳ ಪ್ರದರ್ಶನ ವೀಕ್ಷಿಸಲು ಬಹುತೇಕ ಶಾಸಕರು ಗೈರು ಹಾಜರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವೇ ಸಚಿವರು ಮತ್ತು ಶಾಸಕರು ಮಾತ್ರ ಕುತೂಹಲದಿಂದ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿದರು.

ಪ್ರಜಾ ಪ್ರತಿನಿಧಿ ಸಭೆಯಿಂದ ಶಾಸನ ಸಭೆವರೆಗೆ

ಮೈಸೂರು ಸಂಸ್ಥಾನದಲ್ಲಿ 1881ರಲ್ಲಿ ಆರಂಭವಾದ ಪ್ರಜಾ ಪ್ರತಿನಿಧಿ ಸಭೆಯಿಂದ ಹಿಡಿದು ಸ್ವಾತಂತ್ರ್ಯ ನಂತರದ ಶಾಸನ ಸಭೆ ರಚನೆವರೆಗಿನ ಇತಿಹಾಸವನ್ನು ನಿರ್ದೇಶಕ ಟಿ.ಎನ್. ಸೀತಾರಾಂ ಅವರು ‘ಕರ್ನಾಟಕ ವಿಧಾನಮಂಡಲ ಶಾಸನ ಸಭೆ ನಡೆದು ಬಂದ ಹಾದಿ’ ಸಾಕ್ಷ್ಯಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಏಳು ಭಾಗದ ಪ್ರದರ್ಶನ ಎರಡು ಭಾಗಕ್ಕೆ ಸೀಮಿತಗೊಂಡಿರುವುದರಿಂದ ಚಿತ್ರದಲ್ಲಿ ಅಪೂರ್ಣತೆ ಕಾಣುತ್ತದೆ. ಆದರೆ, ಮೈಸೂರು ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ಶಾಸನ ಸಭೆಯ ಮರು
ಸೃಷ್ಟಿ ಆಕರ್ಷಕವಾಗಿ ಮೂಡಿ ಬಂದಿದೆ. ‘ನಾಡಿನ ನುಡಿಕಾರರ ನೆನೆಯೋಣ’ ಎಂದು ಹಂಸಲೇಖ ಬರೆದಿರುವ ಗೀತೆ ಮತ್ತಷ್ಟು ಮೆರಗು ಹೆಚ್ಚಿಸಿದೆ.

ವಿಧಾನಸೌಧವೆಂದರೆ ಬರೀ ಕಟ್ಟಡವಲ್ಲ. ಕರ್ನಾಟಕಕ್ಕೆ ಅರಸೊತ್ತಿಗೆಯಿಂದ ಮುಕ್ತಿ ನೀಡಿದ  ಪ್ರಜಾಪ್ರಭುತ್ವದ ಬೆಳಕು ಎಂಬುದನ್ನು ‘ವಿಧಾನಸೌಧ ಕಟ್ಟಡ ನಿರ್ಮಾಣ’ದ ಸಾಕ್ಷ್ಯಚಿತ್ರ ಸಾರುತ್ತದೆ.

ದ್ರಾವಿಡ ಶೈಲಿಗೆ ಕರ್ನಾಟಕದ ಶೈಲಿಯನ್ನು ಕಸಿ ಮಾಡಿ ಭವ್ಯಸೌಧ ನಿರ್ಮಿಸಲಾಗಿದೆ. ದೇವಸ್ಥಾನಗಳಿಗೆ ನಿರ್ಮಿಸುವಂತಹ ಕಂಬ, ಜಾನಪದ ಶೈಲಿಯ ವರ್ಣವಿನ್ಯಾಸ, ಗೃಹ ನಿರ್ಮಾಣ ಶೈಲಿಯ ಕುಶಲತೆ ಮತ್ತು ರಾಜ್ಯದ ಪಾರಂಪರಿಕ ಶೈಲಿಯನ್ನು ಮಿಶ್ರಣ ಮಾಡಲಾಗಿದೆ ಎಂಬುದನ್ನು ಈ ಸಾಕ್ಷ್ಯಚಿತ್ರ ಕಣ್ಣು ಕಟ್ಟುವಂತೆ ವಿವರಿಸಿದೆ.

ವಿಧಾನಸೌಧ ನಿರ್ಮಾಣದ ಕಾಲದಲ್ಲಿದ್ದ ಅನೇಕರ ಅನುಭವಗಳನ್ನು ಇದರಲ್ಲಿ ವಿವರಿಸಲಾಗಿದೆ.

ಕೆಂಗಲ್ ಹನುಮಂತಯ್ಯ,  ಜವಾಹರ್‌ ಲಾಲ್ ನೆಹರೂ, ಕಡಿದಾಳ್ ಮಂಜಪ್ಪ ಅವರ ಪಾತ್ರಗಳನ್ನು ಮರುಸೃಷ್ಟಿ ಮಾಡಲಾಗಿದೆ. ಅದರಲ್ಲೂ ವಿಧಾನಸೌಧ ನಿರ್ಮಾಣಕ್ಕೆ ಕೆಂಗಲ್ ಕೊಡುಗೆ ಮತ್ತು ಅವರು ಅನುಭವಿಸಿದ ಸಂಕಟಗಳನ್ನು ಕುರಿತು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.