ADVERTISEMENT

ಗೊಂದಲದ ನಡುವೆಯೂ ‘ನೀಟ್‌’

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯ ಮೂಗುತಿಯನ್ನು ಸಿಬ್ಬಂದಿಯೊಬ್ಬರು ಬಿಚ್ಚಿದರು -ಪ್ರಜಾವಾಣಿ ಚಿತ್ರ
ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯ ಮೂಗುತಿಯನ್ನು ಸಿಬ್ಬಂದಿಯೊಬ್ಬರು ಬಿಚ್ಚಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್-ಯುಜಿ) ನಿಯಮ ಪಾಲನೆಯ ಕೆಲವು ಗೊಂದಲಗಳ ನಡುವೆಯೂ ಭಾನುವಾರ ಸುಲಲಿತವಾಗಿ ನಡೆಯಿತು.

ರಾಜ್ಯದಲ್ಲಿ ಬೆಂಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹುಬ್ಬಳ್ಳಿ, ಮೈಸೂರು, ಕಲಬುರ್ಗಿ, ಬೆಳಗಾವಿ, ಧಾರವಾಡ, ಉಡುಪಿಯಲ್ಲಿ ಪರೀಕ್ಷೆಗಳು ನಡೆದವು. ದೇಶದಾದ್ಯಂತ 136 ನಗರಗಳ 2,255 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಕರ್ನಾಟಕದ 187 ಕೇಂದ್ರಗಳಲ್ಲಿ 96,377 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

‘ಭೌತವಿಜ್ಞಾನ ಮತ್ತು ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆಗಳಿಗಿಂತ ಜೀವವಿಜ್ಞಾನ ಬಹಳ ಸುಲಭವಾಗಿತ್ತು’ ಎಂದು ವಿದ್ಯಾರ್ಥಿ ಅಮಿ‌ತ್‌ ಪೃಥ್ವಿ ತಿಳಿಸಿದರು.

ADVERTISEMENT

‘ಪರೀಕ್ಷೆ ಸುಲಭವಾಗಿತ್ತು. ಆದರೆ, ಭೌತವಿಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ಸಮಸ್ಯೆಗಳನ್ನು ಬಿಡಿಸುವುದಕ್ಕೆ ಹೆಚ್ಚು ಸಮಯ ಬೇಕಾಯಿತು. ಒಳ್ಳೆಯ ರ‍್ಯಾಂಕ್‌ ಸಿಗುವ ನಿರೀಕ್ಷೆ ಇದೆ’ ಎಂದು ಕೋಲಾರದಿಂದ ಪರೀಕ್ಷೆ ಬರೆಯಲು ನಗರಕ್ಕೆ ಬಂದಿದ್ದ ರಂಜಿತಾ ಹೇಳಿದರು.

‘ಭೌತವಿಜ್ಞಾನದ ಪ್ರಶ್ನೆಪತ್ರಿಕೆಯಲ್ಲಿ ಶೇ 45 ರಷ್ಟು ಪ್ರಶ್ನೆಗಳು ಪ್ರಥಮ ಪಿಯು ಪಠ್ಯದಿಂದ ಹಾಗೂ ಶೇ 55ರಷ್ಟು ಪ್ರಶ್ನೆಗಳು ದ್ವಿತೀಯ ಪಿಯು ಪಠ್ಯದಿಂದ ಕೇಳಲಾಗಿತ್ತು. ಶೇ 45ರಷ್ಟು ಸುಲಭ ಪ್ರಶ್ನೆಗಳು, ಶೇ 35ರಷ್ಟು ಸಾಧಾರಣ ಹಾಗೂ ಶೇ 20ರಷ್ಟು ಕಠಿಣ ಪ್ರಶ್ನೆಗಳಿದ್ದವು’ ಎಂದು ಬೇಸ್ ಪ್ರಾಧ್ಯಾಪಕ ಎಚ್‌.ಎನ್‌. ಸುಬ್ರಹ್ಮಣ್ಯ ವಿಶ್ಲೇಷಿಸಿದರು.

‘ರಸಾಯನವಿಜ್ಞಾನ ಪಶ್ನೆಪತ್ರಿಕೆ ಸಾಧಾರಣವಾಗಿದ್ದು, ಶೇ 20ರಷ್ಟು ಕ್ಲಿಷ್ಟ ಪ್ರಶ್ನೆಗಳಿದ್ದವು. ಎನ್‌ಸಿಇಆರ್‌ಟಿ ಪಠ್ಯಕ್ರಮದ ಪ್ರಕಾರವೇ ಪ್ರಶ್ನೆಗಳನ್ನು ಕೇಳಲಾಗಿತ್ತು. ಬಹುತೇಕ ಪ್ರಶ್ನೆಗಳು ನೇರವಾಗಿದ್ದವು’ ಎಂದು ಬೇಸ್ ಪ್ರಾಧ್ಯಾಪಕಿ ಸೌಮ್ಯ ಕುಮಾರಿ ವಿವರಿಸಿದರು.

ಪರೀಕ್ಷೆ ತಪ್ಪಿಸಿಕೊಂಡರು: ಕಲಬುರ್ಗಿ, ಹಾಸನ ಮತ್ತು ಬೀದರ್‌ನಿಂದ ಪರೀಕ್ಷೆಗಾಗಿ ನಗರಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಕ್ಕೆ ಎರಡು–ಮೂರು ನಿಮಿಷ ತಡವಾಗಿ ತಲುಪಿದ್ದರಿಂದ ಪರೀಕ್ಷೆ ಬರೆಯುವುದರಿಂದ ವಂಚಿತರಾದರು.

ಕಾಮರಾಜ ಮಾರ್ಗದಲ್ಲಿನ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬರು 9.32ಕ್ಕೆ ಬಂದಾಗ ಗೇಟ್‌ ಬಂದ್‌ ಆಗಿತ್ತು. ಅದನ್ನು ಹಾರಿ ಒಳಗೆ ಹೋಗಿ, ಸಿಬ್ಬಂದಿ ಬಳಿ ಎಷ್ಟೇ ಬೇಡಿದರೂ ಪರೀಕ್ಷೆಗೆ ಅವಕಾಶ ಮಾಡಿಕೊಡಲಿಲ್ಲ’ ಎಂದು ಹೇಳಿದರು.

ಅಲ್ಲದೇ, ‘ಚಾಮರಾಜಪೇಟೆಯ ಮಹಿಳಾ ಸಮಾಜ ಕೇಂದ್ರದಲ್ಲೂ ತಡವಾಗಿ ಬಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಕಾಪೌಂಡ್ ಹಾರಿ, ಪರೀಕ್ಷೆ ಬರೆಯಲು ಅನುಮತಿಗಾಗಿ ಕೋರಿದರು. ಆದರೆ, ಅವಕಾಶ ಸಿಗಲಿಲ್ಲ. ‘ಮುಂದಿನ ವರ್ಷ ಪರೀಕ್ಷೆ ಬರೆಯಬೇಕಷ್ಟೆ’ ಎಂದು ಗೊಣಗುತ್ತಲೇ ವಿದ್ಯಾರ್ಥಿಗಳು ಊರ ದಾರಿ ಹಿಡಿದರು.

ನಿಯಮ ಓದದೆ ಪೇಚಿಗೆ ಸಿಕ್ಕ ವಿದ್ಯಾರ್ಥಿಗಳು

ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ವಿದ್ಯಾರ್ಥಿಗಳ ವಾಚ್‌, ಕಿವಿಯೋಲೆ, ಮೂಗುತಿ, ಕ್ಲಿಪ್, ಕಾಲ್ಗೆಜ್ಜೆಗಳನ್ನು ತೆಗೆಸಲಾಯಿತು. ವಸ್ತ್ರಸಂಹಿತೆಯನ್ನು ಪಾಲಿಸದೆ ಬಂದಿದ್ದ ಕೆಲ ವಿದ್ಯಾರ್ಥಿಗಳು ಭದ್ರತಾ ಸಿಬ್ಬಂದಿಯ ಕೆಂಗಣ್ಣಿಗೆ ಗುರಿಯಾದರು. ಬೆಳಿಗ್ಗೆ 7.30 ರಿಂದ 8.30 ಹಾಗೂ 8.30ರಿಂದ 9.30.. ಹೀಗೆ ಎರಡು ಬ್ಯಾಚ್‌ಗಳಲ್ಲಿ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಯಿತು.

ಕೂದಲನ್ನು ಬಿಗಿಯಾಗಿ ಕಟ್ಟಿಕೊಂಡಿದ್ದ, ದುಪಟ್ಟಾ, ಶೂ, ದೊಡ್ಡ ಕಿವಿಯೋಲೆ, ಮೂಗುತಿ ಧರಿಸಿದ್ದವರಿಗೆ ತಪಾಸಣೆ ವೇಳೆ ಅವುಗಳನ್ನು ಬಿಚ್ಚಲು ಸೂಚಿಸಿದರು. ಇದಕ್ಕೆ ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ನಿಯಮಗಳನ್ನು ಮೊದಲೇ ಪ್ರಕಟಿಸಿದ್ದೇವೆ, ಆ ರೀತಿಯಲ್ಲಿಯೇ ಬರಬೇಕು ಎಂದು ಸಿಬ್ಬಂದಿ ಹೇಳಿದ್ದರಿಂದ ಅವರು ಸುಮ್ಮನಾದರು.

ವಿಕ್ಟೋರಿಯಾ ರಸ್ತೆಯ ಕೇಂದ್ರೀಯ ವಿದ್ಯಾಲಯದಲ್ಲಿ ಬುರ್ಕಾ ಹಾಕಿಕೊಂಡು ಬಂದಿದ್ದ ಯುವತಿಗೆ ಅದನ್ನು ತೆಗೆಯುವಂತೆ ಸಿಬ್ಬಂದಿ ತಿಳಿಸಿದರು. ಇದಕ್ಕೆ ಒಪ್ಪದಿದ್ದಾಗ ಸಿಬ್ಬಂದಿ ಹಾಗೂ ಆಕೆಯ ನಡುವೆ ವಾದ–ವಿವಾದ ನಡೆಯಿತು. ಕೊನೆಗೆ ತಪಾಸಣೆ ನಂತರ ಬುರ್ಕಾ ಹಾಕಿಕೊಂಡೇ ಪರೀಕ್ಷೆ ಬರೆಯಲು ಸಿಬ್ಬಂದಿ ಅನುಮತಿ ನೀಡಿದರು.

ಮೂಗುತಿ ಹಾಕಿದ್ದವರು ಅದನ್ನು ತೆಗೆಯಲು ಹರಸಾಹಸಪಟ್ಟರು. ಜೊತೆಯಲ್ಲಿ ಬಂದಿದ್ದ ಅಪ್ಪ–ಅಮ್ಮನ ನೆರವಿನಿಂದ ಹೇಗೊ ಅದನ್ನು ಬಿಚ್ಚಿ ಪರೀಕ್ಷೆ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.