ADVERTISEMENT

ಗೋಪಾಲಕೃಷ್ಣ ಬೇಳೂರ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಸಾಗರ : ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗದ ಕಾರಣ ಶಾಸಕತ್ವ ಸ್ಥಾನದಿಂದ ಅನರ್ಹಗೊಂಡಿರುವ ಗೋಪಾಲಕೃಷ್ಣ ಬೇಳೂರು ಅವರಿಗೆ ಜೆಎಂಎಫ್ ನ್ಯಾಯಾಲಯ ಸೋಮವಾರ ರೂ 100 ದಂಡ ವಿಧಿಸಿದೆ.

2008ರ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಅನುಮತಿ ಇಲ್ಲದೆ ರ್ಯಾಲಿ ನಡೆಸಿದರು ಎನ್ನುವ ಕಾರಣಕ್ಕೆ ಬೇಳೂರು ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಈ ಹಿಂದೆಯೇ ಅವರು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು.

ಪ್ರಕರಣದ ಹಿಂದಿನ ವಿಚಾರಣೆ ದಿನಾಂಕದಂದು ಬೇಳೂರು ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರಿಂದ ನ್ಯಾಯಾಧೀಶರು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಆದೇಶ ಹೊರಡಿಸಿದ್ದರು.

ಸೋಮವಾರ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದ ಬೇಳೂರು ತಮ್ಮ ವಕೀಲರ ಮೂಲಕ ವಾರೆಂಟ್ ಆದೇಶ ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗುವಂತೆ ಸೂಚಿಸಿದ ನ್ಯಾಯಾಧೀಶರು ರೂ 100 ದಂಡ ವಿಧಿಸಿ ಬೇಳೂರು ವಿರುದ್ಧದ ವಾರೆಂಟ್ ಆದೇಶವನ್ನು ರದ್ದುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.