ADVERTISEMENT

ಗೋಸೇವಾ ಆಯೋಗದ ಸದಸ್ಯರ ವಜಾಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಜ್ಯ ಗೋಸೇವಾ ಆಯೋಗದ ಅಧ್ಯಕ್ಷರು ಮತ್ತು ನಾಮನಿರ್ದೇಶಿತ ಸದಸ್ಯರನ್ನು ಅ ಸ್ಥಾನಗಳಿಂದ ವಜಾ ಮಾಡಿದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಆಯೋಗದ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶ ನೀಡಿ, ವಿಚಾರಣೆ ಮುಂದೂಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಸೇವಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಅದರ ಅಧ್ಯಕ್ಷರು ಮತ್ತು ನಾಮನಿರ್ದೇಶಿತ ಸದಸ್ಯರನ್ನು ಹೊಸ ಸರ್ಕಾರ, ಆಗಸ್ಟ್ 22ರಂದು ವಜಾ ಮಾಡಿದೆ. `ಸರ್ಕಾರ ಬದಲಾಗಿದೆ ಎಂಬ ಮಾತ್ರಕ್ಕೆ, ಆಯೋಗದ ಅಧ್ಯಕ್ಷರು, ಸದಸ್ಯರನ್ನು ವಜಾ ಮಾಡುವ ಕ್ರಮ ಸರಿಯಲ್ಲ. ಇದು ಮನಸೋಇಚ್ಛೆ ಕೈಗೊಂಡ ತೀರ್ಮಾನ' ಎಂದು ಪುರಾಣಿಕ್ ಪರ ಹಿರಿಯ ವಕೀಲ ಕೆ.ಎಂ. ನಟರಾಜ್ ವಾದಿಸಿದರು.

`ದೂರು ಹಿಂಪಡೆಯುವೆ': ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಶಿವಮೊಗ್ಗದ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರನ್ನು ಹಿಂಪಡೆಯುವುದಾಗಿ ವಕೀಲ ಬಿ. ವಿನೋದ್ ಹೈಕೋರ್ಟ್‌ಗೆ ಬುಧವಾರ ತಿಳಿಸಿದರು.

ಈಶ್ವರಪ್ಪ ಅವರು ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ವಿನೋದ್ ಅವರು ಶಿವಮೊಗ್ಗದ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರನ್ನು ರದ್ದು ಮಾಡುವಂತೆ ಕೋರಿ, ಈಶ್ವರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ದೂರು ಸಲ್ಲಿಸುವಾಗ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿರಲಿಲ್ಲ ಎಂದು ಈಶ್ವರಪ್ಪ ಪರ ವಕೀಲರು ವಾದಿಸಿದ್ದರು. ದೂರನ್ನು ಹಿಂಪಡೆದು, ಹೊಸದಾಗಿ ದೂರು ಸಲ್ಲಿಸುವುದಾಗಿ ವಿನೋದ್ ಪೀಠಕ್ಕೆ ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ, ಈಶ್ವರಪ್ಪ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದರು. ದೂರು ಸಲ್ಲಿಸಿದ್ದ ಸಂದರ್ಭದಲ್ಲಿ ಈಶ್ವರಪ್ಪ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಹಾಗಾಗಿ ಸಕ್ಷಮ ಪ್ರಾಧಿಕಾರದ ಅನುಮತಿ ಬೇಕಿತ್ತು.


ಸರ್ಕಾರದ ಕ್ರಮ ಅಸಿಂಧು:
ಕೋಲಾರ ಜಿಲ್ಲೆಯ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರದ್ದು ಮಾಡಿದ ಸರ್ಕಾರದ ಕ್ರಮ ಅಸಿಂಧು ಎಂದು ಹೈಕೋರ್ಟ್ ಹೇಳಿದೆ. ಕೋಲಾರದ ಎನ್. ಸುರೇಶ್ ಬಾಬು ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್, ಈ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT