ADVERTISEMENT

ಗ್ಯಾಲರಿ ಕುಸಿದು 200 ವಿದ್ಯಾರ್ಥಿಗಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2011, 6:50 IST
Last Updated 7 ಜನವರಿ 2011, 6:50 IST
ಗ್ಯಾಲರಿ ಕುಸಿದು 200 ವಿದ್ಯಾರ್ಥಿಗಳಿಗೆ ಗಾಯ
ಗ್ಯಾಲರಿ ಕುಸಿದು 200 ವಿದ್ಯಾರ್ಥಿಗಳಿಗೆ ಗಾಯ   

ಬೆಂಗಳೂರು: ಇಲ್ಲಿಗೆ ಸಮೀಪದ ಕಗ್ಗಲೀಪುರ ಬಳಿಯ ತರಳು ಗ್ರಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ ರಾಜ್ಯದ 26ನೇ ಸ್ಕೌಟ್ಸ್-ಗೈಡ್ಸ್ ಜಾಂಬೋರೇಟ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಪ್ರೇಕ್ಷಕರ ಗ್ಯಾಲರಿ ಕುಸಿದು, ಸುಮಾರು 200 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸಂಭವಿಸಿದೆ.

ತರಳು ಗ್ರಾಮದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೈದಾನದ ಬಳಿ ದೊಡ್ಡ ಪ್ರಮಾಣದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿತ್ತು. ಈ ಜಾಂಬೋರೆಟ್ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 8,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯ ಎದುರು, ಎಡ ಹಾಗೂ ಬಲಕ್ಕೆ ಮಕ್ಕಳು ಆಸೀನರಾಗಲು ತಾತ್ಕಾಲಿಕ ವೇದಿಕೆಯನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಎಡಬದಿಯ ಪ್ರೇಕ್ಷಕರ ಗ್ಯಾಲರಿ ಸಂಪೂರ್ಣವಾಗಿ ಕುಸಿದು ಈ ಅವಘಡ ಸಂಭವಿಸಿದೆ.
ಸಂಘಟಕರ ಪ್ರಕಾರ ಸಮಾವೇಶದಲ್ಲಿ ಸುಮಾರು 8,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿ ಗ್ಯಾಲರಿಯಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸೀನರಾಗಿದ್ದರು. ವಿದ್ಯಾರ್ಥಿಗಳ ತೂಕವನ್ನು ತಡೆದುಕೊಳ್ಳಲಾಗದೇ ಸುಮಾರು 5-6 ಅಡಿ ಎತ್ತರದ ಗ್ಯಾಲರಿ ನೆಲಕ್ಕುರುಳಿತು.

ಒಬ್ಬರ ಮೇಲೊಬ್ಬರಂತೆ ನೂರಾರು ಮಕ್ಕಳು ನೆಲಕ್ಕುರುಳಿದರು. ಕೆಲವು ವಿದ್ಯಾರ್ಥಿಗಳ ಮೊಣಕೈ, ಮೊಣಕಾಲು ಕಿತ್ತು ಹೋಗಿದ್ದರೆ, ಇನ್ನುಳಿದ ಕೆಲವು ವಿದ್ಯಾರ್ಥಿಗಳ ತಲೆಗೆ ಏಟುಬಿದ್ದಿವೆ. ಮಕ್ಕಳ ಜೊತೆ ಬಂದಿದ್ದ ಕೆಲವು ಶಿಕ್ಷಕರಿಗೂ ಗಾಯಗಳಾಗಿವೆ. ವಿಜಾಪುರದ ಹಿರೂರಿನಿಂದ ಬಂದಿದ್ದ ಶಿಕ್ಷಕ ಲಮಾಣಿ ಅವರಲ್ಲಿ ಒಬ್ಬರು.
ಅಡಿಪಾಯ ಇಲ್ಲದ ಗ್ಯಾಲರಿ: ವಿದ್ಯಾರ್ಥಿಗಳು ನಿಲ್ಲುವಂತಹ ಗ್ಯಾಲರಿಯನ್ನು ಕೇವಲ ಮರದ ತುಂಡುಗಳಿಂದ ನಿರ್ಮಿಸಲಾಗಿತ್ತು. ಈ ತುಂಡುಗಳನ್ನು ಭೂಮಿಯ ಮೇಲೆಯೇ ನಿಲ್ಲಿಸಿ, ಮೊಳೆ ಹೊಡೆದು ಜೋಡಿಸಲಾಗಿತ್ತು. ಭೂಮಿಯನ್ನು ಅಗೆಯದೆ ಮರದ ತುಂಡುಗಳನ್ನು ನಿಲ್ಲಿಸಿದ್ದರಿಂದ ಗ್ಯಾಲರಿ ಕುಸಿದುಬಿದ್ದಿದೆ.
5ನೇ ಪುಟ ನೋಡಿ


ಇಷ್ಟೊಂದು ಕಳಪೆ ಗ್ಯಾಲರಿ ನಿರ್ಮಾಣಕ್ಕೆ ಏನು ಕಾರಣ? ಎಂದು ಸ್ಕೌಟ್ಸ್ ಅಧಿಕಾರಿಯೊಬ್ಬರನ್ನು ಕೇಳಿದಾಗ, ‘ಈ ಸಮಾವೇಶಕ್ಕೆ ಹಣದ ಕೊರತೆ ಇಲ್ಲ. ಸುಮಾರು 1ರಿಂದ 1.5 ಕೋಟಿ ರೂಪಾಯಿ ಹರಿದುಬಂದಿದೆ. ಇಷ್ಟೊಂದು ಹಣವಿದ್ದಾಗಲೂ ಒಳ್ಳೆಯ ಗ್ಯಾಲರಿ ನಿರ್ಮಾಣ ಮಾಡಿಲ್ಲ. ಸಂಘಟನಾ ಸಮಿತಿಯ ಸದಸ್ಯರು ನಿರ್ಲಕ್ಷ ವಹಿಸಿದ್ದರಿಂದಲೇ ಇದಾಗಿದೆ’ ಎಂದು ಹೇಳಿದರು.

ಗ್ಯಾಲರಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡುವ ಇಂಗ್ಲಿಷ್ ‘ಬಿ’ ಅಕ್ಷರದಿಂದ ಆರಂಭವಾಗುವ ಜಿಲ್ಲೆಯ ವಿದ್ಯಾರ್ಥಿಗಳನ್ನು ಎಡಬದಿಯಲ್ಲಿ ಇರಿಸಲಾಗಿತ್ತು. ಇಲ್ಲಿ ಮುಖ್ಯವಾಗಿ ಬೆಂಗಳೂರು, ಬೆಳಗಾವಿ, ಬೀದರ್, ಬಾಗಲಕೋಟ, ವಿಜಾಪುರದಿಂದ ಬಂದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಆಸೀನರಾಗಿದ್ದರು. ಗ್ಯಾಲರಿ ಕುಸಿತದಿಂದ ಈ ಜಿಲ್ಲೆಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ದೊಡ್ಡ ಪ್ರಮಾಣದ ಸಮಾವೇಶವನ್ನು ನಡೆಸಬೇಕಾದರೆ ಕನಿಷ್ಠ ವೈದ್ಯಕೀಯ ಸೌಲಭ್ಯ ಇರಬೇಕು. ಆದರೆ ಶುಶ್ರೂಷೆ ಕಲಿಯುತ್ತಿರುವ ಕೇವಲ 15-20 ವಿದ್ಯಾರ್ಥಿನಿಯರನ್ನು ಬಿಟ್ಟರೆ ಇನ್ನುಳಿದ ಯಾವ ಸಿಬ್ಬಂದಿಯೂ ಅಲ್ಲಿರಲಿಲ್ಲ. ಘಟನೆ ಸಂಭವಿಸುತ್ತಿದ್ದಂತೆ ಪ್ರಥಮ ಚಿಕಿತ್ಸಾ ಶಿಬಿರಕ್ಕೆ ನುಗ್ಗಿ ಬಂದ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಶುಶ್ರೂಷಕ ವಿದ್ಯಾರ್ಥಿನಿಯರು ಪರದಾಡಿದರು.

ಘಟನೆ ನಡೆದು ಮೂಕ್ಕಾಲು ತಾಸಿನ ನಂತರ ಮೊದಲ ಅಂಬುಲೆನ್ಸ್ ಅಲ್ಲಿಗೆ ಬಂದಿತು. ಚಿಕ್ಕಪುಟ್ಟ ಗಾಯಾಳುಗಳನ್ನು ಅಲ್ಲಿಯೇ ಚಿಕಿತ್ಸೆ ನೀಡಲಾಯಿತು. ತುಂಬಾ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT