ADVERTISEMENT

`ಗ್ರಂಥಾಲಯ ಸೇರದ ಒಳ್ಳೆಯ ಕೃತಿಗಳು'

`ಇಗೋ ಕನ್ನಡ' ನಿಘಂಟಿನ ಸಂಯುಕ್ತ ಸಂಪುಟ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST
ಬೆಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ `ಇಗೋ ಕನ್ನಡ' ನಿಘಂಟಿನ ಸಂಯುಕ್ತ ಸಂಪುಟವನ್ನು ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಪ್ರತಿಯನ್ನು ಹಿರಿಯ ವಿದ್ವಾಂಸ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರಿಗೆ ನೀಡಿದರು. ಆರ್.ಎಸ್. ರಾಜಾರಾಮ್, ಪ್ರೊ.ಜಿ.ವೆಂಕಟಸುಬ್ಬಯ್ಯ, ಟಿ.ಆರ್. ಅನಂತರಾಮು ಮತ್ತು ಸಿ.ಆರ್. ಕೃಷ್ಣರಾವ್ ಚಿತ್ರದಲ್ಲಿದ್ದಾರೆ 	-ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ `ಇಗೋ ಕನ್ನಡ' ನಿಘಂಟಿನ ಸಂಯುಕ್ತ ಸಂಪುಟವನ್ನು ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಪ್ರತಿಯನ್ನು ಹಿರಿಯ ವಿದ್ವಾಂಸ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರಿಗೆ ನೀಡಿದರು. ಆರ್.ಎಸ್. ರಾಜಾರಾಮ್, ಪ್ರೊ.ಜಿ.ವೆಂಕಟಸುಬ್ಬಯ್ಯ, ಟಿ.ಆರ್. ಅನಂತರಾಮು ಮತ್ತು ಸಿ.ಆರ್. ಕೃಷ್ಣರಾವ್ ಚಿತ್ರದಲ್ಲಿದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಸರ್ಕಾರದ ಸವಲತ್ತುಗಳು ಪ್ರಕಾಶನ ಮಾಫಿಯಾದ ಪಾಲಾಗುತ್ತಿದ್ದು, ಯಾವ ಒಳ್ಳೆಯ ಕೃತಿಗಳೂ ಗ್ರಂಥಾಲಯ ತಲುಪುತ್ತಿಲ್ಲ. ಜನ ಬಯಸದ ಸಾಹಿತ್ಯಕ್ಕೆ ಕೋಟ್ಯಂತರ ರೂಪಾಯಿ ಪೋಲಾಗುತ್ತಿದೆ' ಎಂದು ಕನ್ನಡ ಸಾಹಿತ್ಯ ಲೋಕದ ಹಿರಿಯರು ಆಕ್ರೋಶ ವ್ಯಕ್ತಪಡಿಸಿದರು.

ನವಕರ್ನಾಟಕ ಪ್ರಕಾಶನ ಶನಿವಾರ ಏರ್ಪಡಿಸಿದ್ದ `ಇಗೋ ಕನ್ನಡ' ನಿಘಂಟಿನ ಸಂಯುಕ್ತ ಸಂಪುಟದ ಬಿಡುಗಡೆ ಸಮಾರಂಭದಲ್ಲಿ ಈ ಆಕ್ರೋಶ ವ್ಯಕ್ತವಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ನವಕರ್ನಾಟಕ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ರಾಜಾರಾಮ್, `ಸರ್ಕಾರ ಒಬ್ಬ ಪ್ರಕಾಶಕರಿಗೆ ರೂ 1 ಲಕ್ಷ  ಎಂಬ ಮಿತಿ ಹಾಕಿದೆ. ನಮ್ಮ ಸಂಸ್ಥೆಯಲ್ಲಿ ವರ್ಷಕ್ಕೆ 50ಕ್ಕೂ ಅಧಿಕ ಕೃತಿಗಳು ಪ್ರಕಟವಾದರೂ ಅವುಗಳನ್ನು ಗ್ರಂಥಾಲಯಕ್ಕೆ ತಲುಪಿಸಲು ಆಗುತ್ತಿಲ್ಲ' ಎಂದು ವಿಷಾದಿಸಿದರು.

`ಒಂದೆಡೆ ಲೆಟರ್ ಹೆಡ್ ಪ್ರಕಾಶನ ಸಂಸ್ಥೆಯೊಂದು 41 ವಿವಿಧ ಹೆಸರಿನಲ್ಲಿ ಪತ್ರ ಕೊಟ್ಟು ಸರ್ಕಾರದಿಂದ ರೂ 41 ಲಕ್ಷ ಪಡೆಯುತ್ತದೆ. ಈ ಸಂಗತಿ ಸರ್ಕಾರಕ್ಕೂ ತಿಳಿದಿದೆ. ಇನ್ನೊಂದೆಡೆ ಪ್ರಶಸ್ತಿ ಪಡೆದ ಅತ್ಯುತ್ತಮ ಕೃತಿಗಳನ್ನೂ ಸರ್ಕಾರ ಖರೀದಿ ಮಾಡುತ್ತಿಲ್ಲ' ಎಂದು ತಿಳಿಸಿದರು.

`ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದಂತೆ ಸರ್ಕಾರದ ಬಳಿ ಸಮಗ್ರ ಮಾಹಿತಿಯೇ ಇಲ್ಲ. ನಮ್ಮ ಸಂಸ್ಥೆ ಪ್ರಕಟಿಸಿದ ಕರ್ನಾಟಕ ಏಕೀಕರಣ ಇತಿಹಾಸ ಕೃತಿಯ 2,000 ಪ್ರತಿಗಳನ್ನು ಖರೀದಿಸಲು ಅದು ಮುಂದೆ ಬಂದಿತ್ತು. ಬಳಿಕ ಏನಾಯಿತೊ, ಗೊತ್ತಿಲ್ಲ. ಕೃತಿ ಹಳೆಯದು ಎನ್ನುವ ನೆಪ ಹೇಳಿ ಖರೀದಿಯನ್ನೇ ಮಾಡಲಿಲ್ಲ' ಎಂದು ರಾಜಾರಾಮ್ ವಿವರಿಸಿದರು.

`ಯಾವುದೇ ವಿವಿ ಮಾಡದ ಕೆಲಸವನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಮಾಡಿದೆ. ಆದರೆ, ಅದಕ್ಕೆ ಸರ್ಕಾರ ಬೆಂಬಲವನ್ನೇ ನೀಡಿಲ್ಲ' ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸಿಟ್ಟು ತೋರಿದರು.

`ಹಳೆಯ ರದ್ದಿಯನ್ನೇ ಮತ್ತೆ ಮುದ್ರಿಸಲು ಸರ್ಕಾರ ವಿಶ್ವವಿದ್ಯಾಲಯಗಳಿಗೆ ಕೋಟ್ಯಂತರ ಅನುದಾನ ನೀಡುತ್ತಿದೆ. ಕನ್ನಡದಲ್ಲಿ ವಿರಳವಾದ ವೈಜ್ಞಾನಿಕ ಪುಸ್ತಕಗಳನ್ನು ಪ್ರಕಟಿಸುವ ಖಾಸಗಿ ಸಂಸ್ಥೆಗಳ ಕಡೆಗೆ ತಿರುಗಿಯೂ ನೋಡುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಕನ್ನಡ ಭಾಷಾ ಸಮುದಾಯದ ಅಗತ್ಯ ಪೂರೈಸುವ, ಬೌದ್ಧಿಕ ಬೆಳವಣಿಗೆಗೆ ನೆರವು ನೀಡುವ, ಸಾಮಾಜಿಕ ಆರೋಗ್ಯ ಕಾಪಾಡುವ ಕೆಲಸವನ್ನು ನವಕರ್ನಾಟಕದಂತಹ ಖಾಸಗಿ ಪ್ರಕಾಶನ ಸಂಸ್ಥೆ ಮಾಡುತ್ತಿದ್ದು, ಸರ್ಕಾರ ಅದಕ್ಕೆ ಬೆಂಬಲ ನೀಡಬೇಕು' ಎಂದು ಹಿರಿಯ ವಿದ್ವಾಂಸ ಪ್ರೊ.ಎಂ.ಎಚ್. ಕೃಷ್ಣಯ್ಯ ಆಶಿಸಿದರು.

`ಇಗೋ ಕನ್ನಡ ಶುಷ್ಕವಾದ ನಿಘಂಟು ಅಲ್ಲ. ರಸವಿಮರ್ಶೆಯ ಮೂಲಕ ಕನ್ನಡದ ರಸಯಾತ್ರೆಗೆ ಕರೆದೊಯ್ಯುತ್ತದೆ' ಎಂದು ಹೇಳಿದರು. `ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ಕಾಲಘಟ್ಟ ದಾಟಿ ನಾವೀಗ ಆಧುನಿಕ ಕನ್ನಡದ ಯುಗದಲ್ಲಿದ್ದೇವೆ. ಅದಕ್ಕೆ ತಕ್ಕಂತೆ ಪ್ರತ್ಯಯಗಳು ಮತ್ತು ವಾಕ್ಯ ರಚನೆಯಲ್ಲಿ ಅಪಾರ ಬದಲಾವಣೆ ಆಗಿದೆ' ಎಂದು ಹೇಳಿದರು.

ವಿಜ್ಞಾನ ತಂತ್ರಜ್ಞಾನ ನಿಘಂಟು ಕೃತಿಯನ್ನೂ ಬಿಡುಗಡೆ ಮಾಡಲಾಯಿತು. ಅದರ ಸಂಪಾದಕರಾದ ಟಿ.ಆರ್. ಅನಂತರಾಮು ಮತ್ತು ಸಿ.ಆರ್. ಕೃಷ್ಣರಾವ್ ಹಾಜರಿದ್ದರು. ಇಗೋ ಕನ್ನಡ ಸಂಯುಕ್ತ ಸಂಪುಟದ ಬೆಲೆ: ರೂ 650, ವಿಜ್ಞಾನ ತಂತ್ರಜ್ಞಾನ ನಿಘಂಟು ಬೆಲೆ: ರೂ 120.

`200 ಪ್ರಶ್ನೆಗಳು ಬಂದವು'
ಬೆಂಗಳೂರು: `ಶಬ್ದಗಳ ರೀತಿ-ನೀತಿಯನ್ನು ವಿಮರ್ಶಿಸುವ ಸಲುವಾಗಿ `ಪ್ರಜಾವಾಣಿ'ಯಲ್ಲಿ ಇಗೋ ಕನ್ನಡ ಅಂಕಣ ಆರಂಭಿಸಿದೆ. ಮೊದಲ ವಾರದಲ್ಲೇ 200 ಪ್ರಶ್ನೆಗಳು ಬಂದಿದ್ದವು' ಎಂದು ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ನೆನಪಿಸಿಕೊಂಡರು.

`ಅರ್ಥ ವಿವರಣೆ ಕೊನೆಯಲ್ಲಿ ಒಂದು ತಿರುವು ಕೊಟ್ಟರೆ ಚೆನ್ನಾಗಿರುತ್ತದೆ ಎಂಬ ಉದ್ದೇಶದಿಂದ ಅಂತಹ ಪ್ರಯತ್ನಕ್ಕೆ ಕೈಹಾಕಿದೆ. ರಸವತ್ತಾಗಿದ್ದ ಈ ಮಾಹಿತಿ ಓದುಗರ ಮನಸ್ಸನ್ನು ಸೆಳೆಯಿತು. ಮನುಷ್ಯ ವಯಸ್ಸು ಆದಂತೆ ಬದಲಾಗುವ ಹಾಗೆ ಶಬ್ದವೂ ಬದಲಾಗುತ್ತದೆ. ಅದನ್ನು ದಾಖಲಿಸುವ ಕೆಲಸವಾಗಬೇಕು. ಶಾಲಾ ಕಾಲೇಜುಗಳಲ್ಲಿ ಇಂತಹ ಶಬ್ದಕೋಶಗಳು ಇರಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT