ADVERTISEMENT

ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಹೊಸನಗರ ತಾಲ್ಲೂಕು ಬ್ರಾಹ್ಮಣವಾಡ ಗ್ರಾಮದಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಫ್ಲೆಕ್ಸ್ ಹಾಕಲಾಗಿತ್ತು
ಹೊಸನಗರ ತಾಲ್ಲೂಕು ಬ್ರಾಹ್ಮಣವಾಡ ಗ್ರಾಮದಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಫ್ಲೆಕ್ಸ್ ಹಾಕಲಾಗಿತ್ತು   

ಹೊಸನಗರ: ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ, ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಾಹ್ಮಣವಾಡ ಗ್ರಾಮಸ್ಥರು ಹಾಕಿದ್ದ ಎಚ್ಚರಿಕೆಯ ಅನಧಿಕೃತ ಫ್ಲೆಕ್ಸ್‌ಗಳನ್ನು ಪಂಚಾಯಿತಿ ತೆರವುಗೊಳಿಸಿದೆ. ಮೂಲಸೌಕರ್ಯ ಕಲ್ಪಿಸದ ಸರ್ಕಾರದ ನೀತಿಯನ್ನು ಖಂಡಿಸಿ ಈ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು.

ಬ್ರಾಹ್ಮಣವಾಡಕ್ಕೆ ಹೊಂದಿಕೊಂಡಂತೆ ಕುಂದಗಲ್ಲು, ಮೂರುನೀರುಹಳ್ಳ, ಸಮಗೋಡು, ನೇರಲಮನೆ ಮತ್ತಿತರ ಹಳ್ಳಿಗಳು ಇವೆ. ಬ್ರಾಹ್ಮಣವಾಡದಲ್ಲಿ ಸುಮಾರು 80 ಕುಟುಂಬಗಳು ವಾಸಿಸುತ್ತಿದ್ದು, 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಹಳ್ಳಿಗಳ ನಡುವಿನ ಸಂಪರ್ಕಕ್ಕೆ ಮಣ್ಣಿನ ರಸ್ತೆಯೇ ಗತಿ. ನಿತ್ಯ 25 ಮಕ್ಕಳು ಕಲಿಯಲು ಎರಡು– ಮೂರು ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಮಗೋಡು ಪ್ರಾಥಮಿಕ ಶಾಲೆಗೆ ಬರುತ್ತಾರೆ.

ಸಂಪರ್ಕ ರಸ್ತೆಗೆ ಡಾಂಬರು ಹಾಕಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ನೀಡಿದ ಮನವಿಗೆ ಸ್ಪಂದಿಸದಿರುವುದರಿಂದ, ಶಿವಮೊಗ್ಗ- ಕೊಲ್ಲೂರು ಮಾರ್ಗದ ಮುಖ್ಯ ರಸ್ತೆಯ ಎರಡು ಕಡೆಗಳಲ್ಲಿ ಚುನಾವಣೆ ಬಹಿಷ್ಕಾರದ ಫ್ಲೆಕ್ಸ್‌ ಹಾಕಲಾಗಿತ್ತು. ಇದಕ್ಕೆ ಗ್ರಾಮಾಡಳಿತದ ಪರವಾನಗಿ ಪಡೆದಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಫ್ಲೆಕ್ಸ್‌ ಅನ್ನು ಕೂಡಲೇ ತೆರವುಗೊಳಿಸಬೇಕೆಂದು ಗ್ರಾಮ ಪಂಚಾಯಿತಿ ಪಿಡಿಒಗೆ ಸೂಚನೆ ನೀಡಲಾಗಿತ್ತು ಎಂದು ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್ ದೇವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.