ADVERTISEMENT

ಗ್ರಾಮ ವಾಸ್ತವ್ಯ: ಸಿ.ಎಂಗೆ ಸುಮಲತಾ ಶುಭಾಶಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 4:16 IST
Last Updated 12 ಜೂನ್ 2019, 4:16 IST
   

ಮಂಡ್ಯ: ಗ್ರಾಮವಾಸ್ತವ್ಯ ಮಾಡಲು ಸಜ್ಜಾಗುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಂಸದೆ ಎ.ಸುಮಲತಾ ಮಂಗಳವಾರ ಶುಭಾಶಯ ಕೋರಿದರು.

ಲೋಕಸಭಾ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ನಡೆದ ಸ್ವಚ್ಛಮೇವ ಜಯತೆ ಜನಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಅವರು ಅವರ ಯೋಜನೆ ಮುಂದುವರಿಸುತ್ತಿದ್ದಾರೆ. ಅವರಿಗೆ ಶುಭಾಶಯ ಕೋರುತ್ತೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ. ಈಗಾಗಲೇ ಮಂಡ್ಯದಲ್ಲಿ ಮನೆ ಮಾಡಿದ್ದೇನೆ. ಶೀಘ್ರ ಅಲ್ಲೇ ವಾಸ್ತವ್ಯ ಮಾಡುತ್ತೇನೆ. ವಾರದಲ್ಲಿ ಮೂರುದಿನ ಜನರ ಸಮಸ್ಯೆ ಆಲಿಸಲು ಮೀಸಲಿಡುತ್ತೇನೆ. ಶೀಘ್ರ ಕಚೇರಿ ತೆರೆಯುತ್ತೇನೆ’ ಎಂದರು.

ADVERTISEMENT

‘ಸಂಸದೆಯಾಗಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ಅದು ಪ್ರಜಾಪ್ರಭುತ್ವದ ದೇವಾಲಯ. ಈ ಅವಕಾಶ ಕೊಟ್ಟ ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತೇನೆ’ ಎಂದರು.

ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ‘ಮಾಧ್ಯಮಗಳಿಗೆ ನನ್ನಿಂದ ವಿವಾದಾತ್ಮಕ ಹೇಳಿಕೆಗಳು ದೊರೆಯುವುದಿಲ್ಲ. ಹಿಂದೆ ನಾನು ಯಾವುದೇ ಟೀಕೆಗಳಿಗೆ ಉತ್ತರ ಕೊಟ್ಟಿಲ್ಲ. ಮುಂದೆಯೂ ನಾನು ನಾನಾಗೇ ಉಳಿಯುತ್ತೇನೆ. ಜಿಲ್ಲೆಯಲ್ಲಿ ಬರ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ. ರಾಜಕಾರಣ ಮಾಡುವ ಸಮಯ ಇದಲ್ಲ’ ಎಂದರು.

ಸಚಿವರ ಗೈರು: ಸ್ವಚ್ಛಮೇವ ಜಯತೆ ಆಂದೋಲನ ಉದ್ಘಾಟನೆ ಮಾಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಅಧ್ಯಕ್ಷತೆ ವಹಿಸಬೇಕಾಗಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಗೈರು ಹಾಜರಾಗಿದ್ದರು. ಜೆಡಿಎಸ್‌ ಶಾಸಕ ಎಂ.ಶ್ರೀನಿವಾಸ್‌ ಮಾತ್ರ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಮಂಜುಶ್ರೀ ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಚುನಾವಣೆ ವೇಳೆ ಸುಮಲತಾ, ಜಿಲ್ಲಾಧಿಕಾರಿ ವಿರುದ್ಧ ಕರ್ತವ್ಯ ಲೋಪದ ಆರೋಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.