ADVERTISEMENT

ಗ್ರಾಹಕ ರಾಷ್ಟ್ರವಾಗುವತ್ತ ಹೆಜ್ಜೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಬೆಂಗಳೂರು: `ಇನ್ನು ಹತ್ತು ವರ್ಷಗಳಲ್ಲಿ ಭಾರತ ಪಾಶ್ಚಿಮಾತ್ಯ ರಾಷ್ಟ್ರಗಳ ಗ್ರಾಹಕ ರಾಷ್ಟ್ರವಾಗಲಿದ್ದು, ಈ ಬಗ್ಗೆ ಜಾಗೃತಿ ವಹಿಸಬೇಕಿದೆ~ ಎಂದು ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹೇಳಿದರು.

ದೇಸಿ ಸಂಸ್ಥೆಯು ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗದಗ ಜಿಲ್ಲೆಯ ರೋಣದ ರಂಗಪ್ಪ ವೈ ಹೂಗಾರ (ವೈಯಕ್ತಿಕ), ಧಾರವಾಡದ ಉಪ್ಪಿನಬೆಟಗೇರಿಯ ಖಾದಿ ನೇಕಾರ ಸಹಕಾರಿ ಉತ್ಪಾದಕ ಸಂಘ ಮತ್ತು ದಾವಣಗೆರೆಯ ಹರಿಹರದ ಗ್ರಾಮೋದ್ಯೋಗ ಸಹಕಾರ ಸಂಘಕ್ಕೆ (ಸಾಂಸ್ಥಿಕ) ದಾಸಿಮಯ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಬ್ರಿಟೀಷರು ಈ ಹಿಂದೆ ದೇಶವನ್ನು ಆಳಿದರು. ಈಗ ದೂರದಲ್ಲೇ ಕುಳಿತು ಆಡಳಿತ ನಡೆಸಲು ಪಾಶ್ಚಿಮಾತ್ಯರು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಾವು ಜಾಗೃತಿ ವಹಿಸುವ ಅಗತ್ಯವಿದೆ. ಮೂಲ ವಿಜ್ಞಾನ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲರೂ ಸಾಫ್ಟ್‌ವೇರ್ ಎಂಜಿನಿಯರ್ ಆಗುತ್ತಿದ್ದಾರೆ.

ಹೀಗೆ ಮುಂದುವರೆದರೆ ಪ್ರತಿಭಾವಂತರು ತಾಂತ್ರಿಕ ಕೆಲಸಗಾರರಾಗುತ್ತಾರೆಯೇ ಹೊರತು ತಂತ್ರಜ್ಞರಾಗುವುದಿಲ್ಲ ಎಂದರು.

`ಕೈಮಗ್ಗ ವಸ್ತುಗಳ ಉತ್ಪಾದನೆ ಮುಳುಗುತ್ತಿರುವ ಕೈಗಾರಿಕೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಉದಯಿಸುತ್ತಿರುವ ಕೈಗಾರಿಕೆಯಾಗಿದೆ. ಖಾದಿಗೆ ಬಹಳ ಬೇಡಿಕೆ ಇದ್ದು ಅದಕ್ಕೆ ತಕ್ಕಂತೆ ಉತ್ಪನ್ನಗಳನ್ನು ಪೂರೈಸಲಾಗುತ್ತಿಲ್ಲ.

ಖಾದಿ ಉತ್ಪನ್ನದ ಹೆಸರಿನಲ್ಲಿ ಶೇ 70ರಷ್ಟು ಕಲಬೆರಕೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೈಮಗ್ಗ ಬಿಟ್ಟು ವಿದ್ಯುತ್ ಮಗ್ಗ ಬಳಸಿ ಎಂದು ಹೇಳುತ್ತಿರುವ ಸರ್ಕಾರ ಜನರನ್ನು ಕೈಮಗ್ಗದಿಂದ ವಿಮುಖ ಮಾಡಲು ಹೊರಟಿದೆ. ಹಳ್ಳಿಗಳಲ್ಲಿ ದಿನದಲ್ಲಿ ಎರಡು ಗಂಟೆಯೂ ವಿದ್ಯುತ್ ಪೂರೈಕೆ ಇರುವುದಿಲ್ಲ~ ಎಂದು ದೇಸಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಪ್ರಸನ್ನ ಹೇಳಿದರು.

ಖಾದಿ ನೇಕಾರ ಸಹಕಾರಿ ಉತ್ಪಾದಕ ಸಂಘದ ಪರವಾಗಿ ಕಾರ್ಯದರ್ಶಿ ಎ.ಎ.ದೊಡ್ಡವಾಡ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದ ಪರವಾಗಿ ಅಧ್ಯಕ್ಷ ಎನ್.ಎಂ.ಚಂದ್ರಶೇಖರಯ್ಯ ಪ್ರಶಸ್ತಿ ಸ್ವೀಕರಿಸಿದರು. ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ದೇಸಿ ಸಂಸ್ಥೆಯ ಕಾರ್ಯ ನಿರ್ವಾಹಕ ಟ್ರಸ್ಟಿ ಎಂ.ಎಸ್.ಕೇಶವ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಿಎಂ ಕರೆಸಬೇಕಿತ್ತು: ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಇನ್ನೂ ವಿಜೃಂಭಣೆಯಿಂದ ಮಾಡಬೇಕಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅಥವಾ ಮಂತ್ರಿಗಳನ್ನು ಆಹ್ವಾನಿಸಿದ್ದರೆ ಅವರ ಬಳಿ ಸಮಸ್ಯೆಗಳನ್ನು ಹೇಳಿ ವಾಸ್ತವದ ಅರಿವು ಮೂಡಿಸಬಹುದಿತ್ತು ಎಂದು ಸ್ವಾತಂತ್ರ್ಯ ಹೋರಾಟಗಾರರೂ ಆದ ಚಂದ್ರಶೇಖರಯ್ಯ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.