ADVERTISEMENT

ಚರಂತಿಮಠ ಮನೆಗೆ ಐ.ಟಿ ದಾಳಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಬಾಗಲಕೋಟೆ: ಬಿಜೆಪಿಯ ಮಾಜಿ ಶಾಸಕ, ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರ ಮನೆ, ಕಚೇರಿ, ಅಂಗಡಿ ಸೇರಿದಂತೆ ಒಟ್ಟು ಐದು ಕಡೆ ಗುರುವಾರ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ವಿವಿಧ ದಾಖಲೆಪತ್ರಗಳನ್ನು ಪರಿಶೀಲಿಸಿದರು.

ಮಹಾರಾಷ್ಟ್ರ, ಗೋವಾ ಮತ್ತು ಬೆಳಗಾವಿಯಿಂದ ಬಂದಿದ್ದ 30ಕ್ಕೂ ಅಧಿಕ ಅಧಿಕಾರಿಗಳು  ಬೆಳಿಗ್ಗೆ 7 ರಿಂದ ರಾತ್ರಿ ವರೆಗೆ ಲೆಕ್ಕಪತ್ರ ಮತ್ತು ಕಡತಗಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಚರಂತಿಮಠ ಬೆಂಗಳೂರಿನಲ್ಲಿದ್ದರು.

‘ಹಣ ಲೆಕ್ಕ ಮಾಡುವ ಯಂತ್ರದೊಂದಿಗೆ ಬಂದಿದ್ದ ಐ.ಟಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ. ದಾಳಿಯಿಂದ ಅವರೇ ನಿರಾಶರಾಗಿ­ದ್ದಾರೆ’ ಎಂದು  ‘ಪ್ರಜಾವಾಣಿ’ಗೆ ವೀರಣ್ಣ ಚರಂತಿಮಠ ತಿಳಿಸಿದರು.

‘ಬಿ.ವಿ.ವಿ ಸಂಘದ ಬೆಳವಣಿಗೆ ಸಹಿಸದವರು ಈ ಷಡ್ಯಂತ್ರ ರೂಪಿಸಿದ್ದಾರೆ.  ಸಂಘದಿಂದ ವಜಾ­ಗೊಂಡಿರುವ ಟಿ.ಎಂ. ಹುಂಡೇಕಾರ, ವಿಜಯ ಅಂಗಡಿ ಮತ್ತು ಲಿಂಗರಾಜ ವಾಲಿ ಎಂಬುವವರು ಐ.ಟಿ ಇಲಾಖೆಗೆ ನನ್ನ ಮತ್ತು ಸಂಘದ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಅವರಿಗೆ ತಕ್ಕ ಉತ್ತರವೂ ಸಿಕ್ಕಿದೆ. ಐ.ಟಿ ದಾಳಿಯ ಹಿಂದೆ ಕಾಂಗ್ರೆಸ್‌ ಕೈವಾಡ ಇರುವ ಬಗ್ಗೆ ಪ್ರತಿಕ್ರಿಯಿಸಲಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.