ADVERTISEMENT

ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 9:39 IST
Last Updated 12 ಜೂನ್ 2018, 9:39 IST
ಗುಡ್ಡ ಕುಸಿದು ರಸ್ತೆಯನ್ನೆ ಆವರಿಸಿದೆ.
ಗುಡ್ಡ ಕುಸಿದು ರಸ್ತೆಯನ್ನೆ ಆವರಿಸಿದೆ.   

ಮಂಗಳೂರು: ಚಾರ್ಮಾಡಿ ಘಾಟ್‌ನಲ್ಲಿ ಸೋಮವಾರ ರಾತ್ರಿಯಿಂದ ಗುಡ್ಡ ಕುಸಿತ ಆರಂಭವಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಸೋಮವಾರ ರಾತ್ರಿಯಿಂದಲೇ‌ ಚಾರ್ಮಾಡಿ ಘಾಟ್‌ನಲ್ಲಿ ಸಿಲುಕಿರುವ ಪ್ರಯಾಣಿಕರು, ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ನೀರು, ತಿಂಡಿ‌ ಸಿಗದೇ ಮಕ್ಕಳು ಪರದಾಡುವಂತಾಗಿದೆ.

ಒಟ್ಟು 9 ಕಡೆ ಗುಡ್ಡ ಕುಸಿದಿದ್ದು. ಇನ್ನು‌ ಕೆಲವೆಡೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಒಂದು ಕಡೆಯ ಮಣ್ಣನ್ನು ತೆರವು ಮಾಡುತ್ತಿದ್ದಂತೆ, ಮತ್ತೊಂದು ಕಡೆ ಮಣ್ಣು ಕುಸಿಯುತ್ತಿದೆ.

ADVERTISEMENT

ಎರಡು ಕಡೆಗಳಲ್ಲಿ‌ ವಾಹನಗಳು ಸಾಲುಗಟ್ಟಿ ನಿಂತಿವೆ. ಮಣ್ಣು ತೆರವಿಗೆ ಜೆಸಿಬಿ, ಹಿಟಾಚಿಗಳನ್ನು ಸ್ಥಳಕ್ಕೆ ತರಲಾಗಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕಾರ್ಯಾಚರಣೆಗೆ ತೊಂದರೆ ಆಗುತ್ತಿದೆ. ಆದರೂ ಮಣ್ಣು ತೆರವು ಮಾಡಲು‌ ನಿರಂತರ ಕೆಲಸ ಮಾಡಲಾಗುತ್ತಿದೆ. ಮಣ್ಣು ಕುಸಿತದಿಂದ ಹಾಸನ ಮಾರ್ಗದ ರೈಲು ಸಂಚಾರ‌ ಸೋಮವಾರದಿಂದ ಸ್ಥಗಿತಗೊಂಡಿತ್ತು, ಈಗ ರಸ್ತೆ ಸಂಚಾರವೂ ಸ್ಥಗಿತವಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದಾಗಿ ಮಣ್ಣು ತೆರವು ಕಾರ್ಯ ವಿಳಂಬಆಗುತ್ತಿದೆ. ಹೀಗಾಗಿ ವಾಹನಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳು ಕೊಟ್ಟಿಗೆಹಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳೂರಿನಿಂದ ಚಿಕ್ಕಮಗಳೂರಿನ ಕಡೆಗೆ ಹೋಗುವ ವಾಹನಗಳು ಉಜಿರೆಯಿಂದ ಕುದುರೆಮುಖ‌ ಮಾರ್ಗವಾಗಿ‌ ಸಂಚರಿಸಲು‌ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.

ಜನರಿಗೆ ಕೆಲವೆಡೆ ಉಪಾಹಾರದ‌ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಸರದಿಯಲ್ಲಿ ನಿಂತಿದ್ದು, ಜನರ ಸಂಖ್ಯೆ ಹೆಚ್ಚಾಗಿದೆ. ಎಲ್ಲರಿಗೂ ತಿಂಡಿ, ನೀರು ಒದಗಿಸುವುದು ಕಷ್ಟಕರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.