ಕೋಲಾರ: ಅಧಿಕಾರಕ್ಕೆ ಅಂತಃಕರಣ ಇಲ್ಲದಿರುವುದೇ ಪ್ರಜಾಪ್ರಭುತ್ವದ ಸದ್ಯದ ಬಿಕ್ಕಟ್ಟು. ಇಂಥ ಸನ್ನಿವೇಶದಲ್ಲಿ ಡಾ.ಜಿ. ರಾಮಕೃಷ್ಣ ಅವರು ಪ್ರತಿಪಾದಿಸುವ ನೈತಿಕ ನಿಷ್ಠೆ ಮತ್ತು ತತ್ವಬದ್ಧತೆ ಹೋರಾಟದ ವಲಯವೊಂದನ್ನು ರೂಪಿಸಿದೆ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಡಾ.ಎಲ್. ಬಸವರಾಜು ಪ್ರತಿಷ್ಠಾನವು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಜಿ. ರಾಮಕೃಷ್ಣ ಅವರಿಗೆ ಎಲ್.ಬಸವರಾಜು ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅಭಿನಂದನೆಯ ನುಡಿಗಳನ್ನಾಡಿದ ಅವರು, ಪ್ರಗತಿಪರರು ಯಾರು? ಪ್ರತಿಗಾಮಿಗಳು ಯಾರು ಎಂಬುದನ್ನು ಗುರುತಿಸಲು ಸಾಧ್ಯವಾಗದ ಸನ್ನಿವೇಶ ಇಂದಿನದು. ಯಾರು ಎಲ್ಲಿದ್ದಾರೆ, ಯಾರೊಂದಿಗಿದ್ದಾರೆ ಎಂದು ಯಾರಿಗೂ ಗೊತ್ತಾಗದ ಸನ್ನಿವೇಶದಲ್ಲಿ ಪ್ರಗತಿಪರತೆಯ ಫೋಸನ್ನು ಕೊಡದ ಅಪರೂಪದ ಜೀವಿಯಾಗಿ ರಾಮಕೃಷ್ಣ ಗಮನ ಸೆಳೆಯುತ್ತಾರೆ ಎಂದರು.
ಪ್ರಶಸ್ತಿಯನ್ನು ಲೇಖಕ ಎಂ.ಎಸ್. ಪ್ರಭಾಕರ್ (ಕಾಮರೂಪಿ) ಪ್ರದಾನ ಮಾಡಿದರು. ಪ್ರತಿಷ್ಠಾನದ ಹೇಮಾರೆಡ್ಡಿ, ಡಾ.ರಾಮಲಿಂಗಪ್ಪ ಟಿ.ಬೇಗೂರು, ವಿಶಾಲಾಕ್ಷಿ ಬಸವರಾಜು, ಲಕ್ಷ್ಮೀಪತಿ ಕೋಲಾರ, ಪ್ರೊ.ಎನ್.ಬಿ. ಚಂದ್ರಮೋಹನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.