ADVERTISEMENT

ಚಿಮೂಗೆ ಬೆಂಬಲ ಬೇಡವಾಗಿತ್ತು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 16:55 IST
Last Updated 16 ಫೆಬ್ರುವರಿ 2011, 16:55 IST

ಮೈಸೂರು: ಬೆಂಗಳೂರಿನಲ್ಲಿ ಈಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪರವಾಗಿ ನಿರ್ಣಯ ಕೈಗೊಂಡಿರುವುದರ ವಿರುದ್ಧ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಬುಧವಾರ ಕಿಡಿಕಾರಿದರು.

ನಗರದ ಕಲಾಮಂದಿರದಲ್ಲಿ ಡಾ.ದೇಜಗೌ ಅಭಿಮಾನಿ ಬಳಗವು ನಾಡೋಜ ಡಾ.ದೇ.ಜವರೇಗೌಡ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ತಡೆಹಿಡಿದಿದ್ದರೇ ಹೊರತು ನಿರಾಕರಿಸಿರಲಿಲ್ಲ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಇಷ್ಟೊಂದು ಸಣ್ಣ ವಿಷಯವನ್ನು ನಿರ್ಣಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕುಲಾಧಿಪತಿಗಳೂ ಆದ ರಾಜ್ಯಪಾಲರು, ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ತಡೆ ಹಿಡಿಯುವ ಮೂಲಕ ಕರ್ನಾಟಕ, ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಬೊಬ್ಬೆ ಹಾಕಲಾಯಿತು. ನೀವೇ ಹೇಳಿ (ಸಭಿಕರಿಗೆ) ಕರ್ನಾಟಕ ಚಿದಾನಂದಮೂರ್ತಿಗಿಂತ ಚಿಕ್ಕದೇ’ ಎಂದು ಪ್ರಶ್ನಿಸಿದರು.

‘ಪಂಪ ಕವಿ ಅಣ್ಣಿಗೇರಿಯವರು ಎಂದು ಈ ಪಂಡಿತರು ಹೇಳುತ್ತಾರೆ. ಇದನ್ನು ನಾವು ನಂಬಬೇಕೇ? ಪಂಪ ಕವಿ ಹುಟ್ಟನ್ನು ಲೆಕ್ಕ ಹಾಕಿದರೆ ಈಗಾಗಲೇ 50 ತಲೆಮಾರುಗಳು ಆಗಿವೆ. ನಮ್ಮ ಮುತ್ತಜ್ಜಿ ಯಾರು ಎಂದು ಕೇಳಿದರೆ ಹೇಳುವುದೇ ಕಷ್ಟ, ಇವರು ಹೇಳುವುದನ್ನು ನಂಬಬೇಕೆ’ ಎಂದು ಟೀಕಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ’ಅಖಿಲ ಭಾರತ ಕನ್ನಡ ಸಾಹಿತ್ಯ  ಸಮ್ಮೇಳನದಂತಹ ವೇದಿಕೆಯನ್ನು ಚಿದಾನಂದಮೂರ್ತಿ ಅವರ ಬೆಂಬಲಕ್ಕೆ ಬಳಸಿಕೊಂಡಿದ್ದು ನೋವನ್ನು ಉಂಟು ಮಾಡಿತು’ ಎಂದು ಹೇಳುವ ಮೂಲಕ ಪಾಟೀಲ ಪುಟ್ಟಪ್ಪನವರನ್ನು ಬೆಂಬಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.