ADVERTISEMENT

ಚೀನಾ ಬದಲು ರಾಜ್ಯ ಪ್ರವಾಸ ಮಾಡಿ

ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಹುಬ್ಬಳ್ಳಿ: `ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರಾಜ್ಯದ ಜನತೆ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚೀನಾ ಪ್ರವಾಸಕ್ಕೆ ತೆರಳುವುದು ಸರಿಯಲ್ಲ. ಪ್ರವಾಸ ಕೈಬಿಟ್ಟು ರಾಜ್ಯದ ಜನರ ಸಂಕಷ್ಟ ಆಲಿಸಲಿ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶನಿವಾರ ಇಲ್ಲಿ ಸಲಹೆ ಮಾಡಿದರು.

`ಮುಖ್ಯಮಂತ್ರಿಗಳು ಕರ್ನಾಟಕ ಎಂದರೆ ಕೇವಲ ಮೈಸೂರು ಮತ್ತು ಬೆಂಗಳೂರು ಎಂದು ಭಾವಿಸಿದಂತಿದೆ. ಮುಖ್ಯಮಂತ್ರಿ ಆಗಿ 100 ದಿನ ಕಳೆದರೂ ರಾಜ್ಯದ ಇತರ ಜಿಲ್ಲೆಗಳಿಗೆ ಭೇಟಿ ನೀಡಲು ಅವರಿಗೆ ಸಮಯವೇ ದೊರೆತಿಲ್ಲ' ಎಂದು ಅವರು ಲೇವಡಿ ಮಾಡಿದರು.

`ರಾಜ್ಯದಲ್ಲಿ ಆಡಳಿತಯಂತ್ರ ಸಂಪೂರ್ಣ ಕುಸಿದಿದೆ. ಸಚಿವರು ವಿಧಾನಸೌಧದಲ್ಲಿ ಸಿಗುತ್ತಿಲ್ಲ. ಅವರಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಅತಿವೃಷ್ಟಿಯಿಂದ ಅಡಿಕೆ, ಭತ್ತ ಹಾಗೂ ಕಾಫಿ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದರೂ, ಇಲ್ಲಿಯವರೆಗೆ0 ಹಾನಿಯ ಪ್ರಮಾಣ ಅಂದಾಜಿಸಿ ಕೇಂದ್ರಕ್ಕೆ ವರದಿ ಕೊಡುವ ಕೆಲಸ ಕೂಡ ರಾಜ್ಯ ಸರ್ಕಾರದಿಂದ ಆಗಿಲ್ಲ' ಎಂದು ಶೆಟ್ಟರ್ ಟೀಕಿಸಿದರು.

`ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಪ್ರಿಯತೆ ಪಡೆದಿದ್ದ ಭಾಗ್ಯಲಕ್ಷ್ಮಿ ಹಾಗೂ ಬೈಸಿಕಲ್ ಯೋಜನೆ ನಿಲ್ಲಿಸಲಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ 25,000 ರೂಪಾಯಿವರೆಗೆ ರೈತರ ಸಾಲ ಮನ್ನಾ ಮಾಡಿದ್ದು, ಆ ಬಾಬ್ತಿನಲ್ಲಿ ಸಹಕಾರಿ ಸಂಘಗಳಿಗೆ ಸರ್ಕಾರ ಈ ವರ್ಷ ಕೊಡಬೇಕಿದ್ದ 1500 ಕೋಟಿ ರೂಪಾಯಿ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ರೈತರಿಗೆ ಹೊಸದಾಗಿ ಸಾಲ ಸಿಗದಂತಾಗಿದೆ' ಎಂದು ಅವರು ಆರೋಪಿಸಿದರು.

ಆಶ್ರಯ ಯೋಜನೆಯಡಿ ಗ್ರಾಮ ಪಂಚಾಯಿತಿಯೊಂದಕ್ಕೆ ಕೇವಲ 20 ಮನೆ ಸೀಮಿತಗೊಳಿಸಿರುವುದು ಸರಿಯಲ್ಲ. ಮೈಸೂರು ಮಹಾನಗರ ಪಾಲಿಕೆಗೆ ಮಾತ್ರ 100 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿರುವ ಸಿದ್ದರಾಮಯ್ಯ, ಅದನ್ನು ರಾಜ್ಯದ ಎಲ್ಲಾ ಪಾಲಿಕೆಗಳಿಗೂ ವಿಸ್ತರಿಸಲಿ ಎಂದು ಒತ್ತಾಯಿಸಿದರು.

ಬಿಜೆಪಿಗೆ ಮರಳಿದ ನಮೋಶಿ: ವಿಧಾನ ಪರಿಷತ್ ಮಾಜಿ ಸದಸ್ಯ ಶಶಿಲ್ ನಮೋಶಿ ಶನಿವಾರ ಜೆಡಿಎಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾದರು. ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಸ್ವಾಗತಿಸಿದರು.

`ಸಿಎಂ ಚಾಮರಾಜನಗರಕ್ಕೆ ಭೇಟಿ ಯಾವಾಗ?
`ಸಮಾಜವಾದಿ ಹಿನ್ನೆಲೆಯಿಂದ ಬಂದಿರುವುದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ಕೊಡುವ ರೀತಿಯೇ ಪಕ್ಕದ ಚಾಮರಾಜನಗರಕ್ಕೂ ಹೋಗಿ ತಮ್ಮಲ್ಲಿನ ವೈಚಾರಿಕ ಪ್ರಜ್ಞೆಯನ್ನು ಓರೆಗೆ ಹಚ್ಚಲಿ' ಎಂದು ಜಗದೀಶ್ ಶೆಟ್ಟರ್ ಸವಾಲು ಹಾಕಿದರು.

`ನಾನು ಮುಖ್ಯಮಂತ್ರಿ ಆಗ್ದ್ದಿದಾಗ ಮೂರು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದೆ. ಮೈಸೂರಿಗೆ ಹೋದರೂ ಸಿದ್ದರಾಮಯ್ಯ, ಹತ್ತಿರದ ಚಾಮರಾಜನಗರದತ್ತ ತಲೆ ಹಾಕುವುದಿಲ್ಲ. ಅಲ್ಲಿಗೆ ಹೋದರೆ ಅಧಿಕಾರ ಕಳೆದುಕೊಳ್ಳವ ಭೀತಿ ಅವರನ್ನು ಕಾಡುತ್ತಿದೆ' ಎಂದು ಶೆಟ್ಟರ್ ಕಟಕಿಯಾಡಿದರು.

ಅನ್ನಭಾಗ್ಯ ಯೋಜನೆಯ ಉಪಯೋಗ ಪಡೆಯುತ್ತಿರುವ ಫಲಾನುಭವಿಗಳ ಕುರಿತ ನೈಜ ಸಂಖ್ಯೆ ಬಹಿರಂಗಪಡಿಸಲು ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಶೆಟ್ಟರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.