ADVERTISEMENT

ಚುನಾಯಿತ ಪ್ರತಿನಿಧಿಗಳು ಹೋರಾಟಕ್ಕೆ ಬನ್ನಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ಲಿಂಗಸುಗೂರ: ಚರ್ಚೆಗಳಿಂದ ಏನನ್ನೂ ಸಾಧಿಸಲಾಗದು. ದಯವಿಟ್ಟು ಹೋರಾಟಕ್ಕೆ ಬನ್ನಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳಿಗೆ ಆಹ್ವಾನ ನೀಡಿದ ವಿಶೇಷ ಪ್ರಸಂಗ ಜರುಗಿತು.

ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಗೆ ರೈತ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೇವಲ ಸಭಾಂಗಣದಲ್ಲಿ ಕುಳಿತು ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ಮಾಡಿದರೆ ಜನಸಾಮಾನ್ಯರ ನೋವು ನಲಿವು ಅರ್ಥವಾಗುವುದಿಲ್ಲ. ರೈತರು ನಡೆಸುತ್ತಿರುವ ಹೋರಾಟಗಳಲ್ಲಿ ಬೀದಿಗಿಳಿದು ಹೋರಾಟ ಮಾಡಿದಾಗ ಮಾತ್ರ ಅವರ ಸಂಕಷ್ಟಗಳು ಗಮನಕ್ಕೆ ಬರುತ್ತವೆ ಎಂದರು.

 ತಾಲ್ಲೂಕಿನಾದ್ಯಂತ ವಿದ್ಯುತ್ ಪರಿವರ್ತಕಗಳು ಸುಟ್ಟು ರೈತರು ಪರದಾಡುತ್ತಿದ್ದಾರೆ. ಸರ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ತಿಂಗಳುಗಳೆ ಗತಿಸಿದರು ಸರ್ವೆ ಮಾಡಲು ಸಿಬ್ಬಂದಿ ಮುಂದಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮನಸೋ ಇಚ್ಛೆ ದರಕ್ಕೆ ಮಾರಾಟ ಮಾಡಿಕೊಳ್ಳುವುದು ಸೇರಿದಂತೆ ಇತರೆ ಸಮಸ್ಯೆಗಳ ಗಮನ ಸೆಳೆದರು.

ದೇಶದ ಬೆನ್ನೆಲೆಬು ಎಂದು ಎಲ್ಲಾ ಚುನಾಯಿತ ಪ್ರತಿನಿಧಿಗಳು ಭಾಷಣ ಮಾಡುವುದನ್ನು ನಿಲ್ಲಿಸಿ. ಪ್ರತಿನಿತ್ಯ ಮಾರುಕಟ್ಟೆ ಮತ್ತು ವಿವಿಧ ಇಲಾಖೆಗಳಲ್ಲಿ ನೂರಾರು ರೈತರು ಮಧ್ಯವರ್ತಿಗಳ ಹಾವಳಿಯಿಂದ ಬಸವಳಿದಿದ್ದಾರೆ. ರೈತರಿಗೆ ನ್ಯಾಯ ಕೊಡದ ಜೆಸ್ಕಾಂ, ಕೃಷಿ, ಕಂದಾಯ, ಸರ್ವೆ ಇಲಾಖೆ, ತೋಟಗಾರಿಕೆ, ರೇಷ್ಮೆ ಮತ್ತಿತರ ಇಲಾಖೆಗಳ ವಿರುದ್ಧ ಶಿಸ್ತು ಕ್ರಮಕ್ಕೆ ಗೊತ್ತುವಳಿ ಸ್ವೀಕರಿಸುವಂತೆ ಕೆಲ ಸಮಯ ರೈತ ಮುಖಂಡರು ಪಟ್ಟು ಹಿಡಿದಿದ್ದರು.

ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಭೂಪನಗೌಡ ಕರಡಕಲ್ಲ, ಎಚ್.ಬಿ. ಮುರಾರಿ ಶಾಸಕ ಪ್ರತಾಪಗೌಡ ಮಸ್ಕಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ ಮಾಕಾಪುರ, ಉಪಾಧ್ಯಕ್ಷೆ ಸಂಗಮ್ಮ ಪಾಟೀಲ ಹಾಗೂ ಹಾಜರಿದ್ದ ಸರ್ವ ಸದಸ್ಯರು ಮಾತನಾಡಿ, ರೈತಪರ ಹೋರಾಟಗಳಿಗೆ ತಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆ ಎಂದು ಸಮಾಧಾನಪಡಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.