ಮಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜನಾರ್ದನ ಪೂಜಾರಿ ಅವರು ಮೂಡುಬಿದಿರೆಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸುವ ವೇಳೆ ಬ್ರಾಹ್ಮಣರಿಗೆ ಹಾಗೂ ಗೌಡ ಸಾರಸ್ವತ ಬ್ರಾಹ್ಮಣರಿಗೆ ಮೀಸಲಾತಿ ಕಲ್ಪಿಸುವುದಾಗಿ ಘೋಷಿಸುವ ಮೂಲಕ ಮತದಾರರಿಗೆ ಆಮಿಷ ಒಡ್ಡಿದ್ದಾರೆ’ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಚುನಾವಣಾಧಿಕಾರಿಗೆ ಮಂಗಳವಾರ ದೂರು ನೀಡಿದೆ.
‘ನಾನು ಗೆದ್ದರೆ ಬ್ರಾಹ್ಮಣರಿಗೆ, ಗೌಡ ಸಾರಸ್ವತ ಬ್ರಾಹ್ಮಣರಿಗೆ ಮೀಸಲಾತಿ ಕೊಡಿಸಲು ಪ್ರಯತ್ನಿಸುತ್ತೇನೆ. ಯುವಕ ಯುವತಿಯರಿಗೆ ಸರ್ಕಾರಿ–ಖಾಸಗಿ ಸಹಭಾಗಿತ್ವ ಯೋಜನೆ ಮೂಲಕ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುತ್ತೇನೆ’ ಎಂದು ಜನಾರ್ದನ ಪೂಜಾರಿ ಹೇಳಿದ್ದನ್ನು ಪತ್ರಿಕೆಯೊಂದು ವರದಿ ಮಾಡಿದೆ.
‘ಜಾತಿ ಆಧಾರದಲ್ಲಿ ಆಮಿಷ ಒಡ್ಡುವುದು ಅಪರಾಧ. ನೀತಿ ಸಂಹಿತೆ ಉಲ್ಲಂಘಿಸಿದ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.