ADVERTISEMENT

ಚುನಾವಣಾ ವರದಿಗಳ ಮೇಲೆ ಹದ್ದಿನ ಕಣ್ಣು

ಪ್ರವೀಣ ಕುಲಕರ್ಣಿ
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST
ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ತೆರೆಯಲಾದ ಚುನಾವಣಾ ಮಾಧ್ಯಮ ಕೇಂದ್ರ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದು, ಟಿವಿ ವಾಹಿನಿಗಳ ಎಲ್ಲ ದೃಶ್ಯಾವಳಿ ಮುದ್ರಿಸಿಕೊಳ್ಳುತ್ತಿದೆ 	-ಪ್ರಜಾವಾಣಿ ಚಿತ್ರ
ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ತೆರೆಯಲಾದ ಚುನಾವಣಾ ಮಾಧ್ಯಮ ಕೇಂದ್ರ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದು, ಟಿವಿ ವಾಹಿನಿಗಳ ಎಲ್ಲ ದೃಶ್ಯಾವಳಿ ಮುದ್ರಿಸಿಕೊಳ್ಳುತ್ತಿದೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ಟೆಲಿವಿಷನ್ ಮತ್ತು ಮುದ್ರಣ ಮಾಧ್ಯಮದಲ್ಲಿ ಬರುತ್ತಿರುವ ಚುನಾವಣಾ ವರದಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ಪ್ರತಿಯೊಂದು ವರದಿ ದಾಖಲಿಸಲು ಬಿಬಿಎಂಪಿ ಕಚೇರಿಯಲ್ಲಿ ರಾಜ್ಯ ಮಾಧ್ಯಮ ಘಟಕ  ತೆರೆದಿದೆ.

ಟಿ.ವಿ ಮತ್ತು ಪತ್ರಿಕಾ ವರದಿಗಳು ಮಾತ್ರವಲ್ಲದೆ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಹರಿದಾಡುವ ಸಂದೇಶಗಳಿಗೂ ಈ ಘಟಕ `ಗಾಳ' ಹಾಕಲಿದೆ. ಟಿ.ವಿಗಳಲ್ಲಿ ಬಿತ್ತರವಾಗುವ ಎಲ್ಲ ವರದಿಗಳನ್ನು ದಿನದ 24 ಗಂಟೆಗಳ ಕಾಲ ಮುದ್ರಿಸಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ 36 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಮೂರು ಪಾಳಿಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಮಾತ್ರವಲ್ಲದೆ ಹಿಂದಿ ಮತ್ತು ಇಂಗ್ಲಿಷ್ ವಾಹಿನಿಗಳಲ್ಲಿ ಬಿತ್ತರವಾಗುವ ರಾಜ್ಯ ಚುನಾವಣೆಗೆ ಸಂಬಂಧಿಸಿದ ವರದಿಗಳನ್ನೂ ಮುದ್ರಿಸಿಕೊಳ್ಳಲಾಗುತ್ತಿದೆ. 14 ಕಂಪ್ಯೂಟರ್‌ಗಳು ಎಡೆಬಿಡದೆ ಈ ಕೆಲಸದಲ್ಲಿ ಮಗ್ನವಾಗಿವೆ. ಚುನಾವಣಾ ವರದಿಗಳಲ್ಲಿ ಎರಡು ಭಾಗ ಮಾಡಲಾಗಿದೆ. ಒಂದು ಸಾಮಾನ್ಯ ಸುದ್ದಿಗಳ ವಿಭಾಗವಾದರೆ, ಮತ್ತೊಂದು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ವರದಿಗಳ ವಿಭಾಗ.

ಮಾಹಿತಿ ರವಾನೆ: ಮಾಧ್ಯಮ ಕೇಂದ್ರದ ಸಿಬ್ಬಂದಿ ಈ ವರದಿಗಳನ್ನು ಪ್ರತ್ಯೇಕ ಮಾಡಿದ ತಕ್ಷಣ ಸಂಬಂಧಿಸಿದ ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ವಿಡಿಯೊ ಕ್ಲಿಪ್ಪಿಂಗ್‌ಗಳ ಸಹಿತ ಮಾಹಿತಿ ರವಾನೆ ಮಾಡಲಾಗುತ್ತದೆ. ಅದರ ಒಂದು ಪ್ರತಿಯನ್ನು ಮುಖ್ಯ ಚುನಾವಣಾ ಅಧಿಕಾರಿಗಳು ಹಾಗೂ ಲೆಕ್ಕ ಪರಿಶೋಧನಾ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗುತ್ತದೆ.

ಟಿ.ವಿಗಳಲ್ಲಿ ಒಡಮೂಡುವ ಸ್ಕ್ರಾಲ್ (ಅಡಿಟಿಪ್ಪಣಿ) ಸುದ್ದಿಗಳನ್ನು ಸಹ ಮಾಧ್ಯಮ ಕೇಂದ್ರದ ಸಿಬ್ಬಂದಿ ಟಿಪ್ಪಣಿ ಮಾಡಿಕೊಂಡು ತಕ್ಷಣ ಸಂಬಂಧಿಸಿದ ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸುತ್ತಾರೆ. ಇದರಿಂದ ಆಯಾ ಕ್ಷೇತ್ರದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವುದು ಸುಲಭವಾಗುತ್ತದೆ.

ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ದಾಖಲೀಕರಣ ನಿತ್ಯ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪೂರ್ಣಗೊಳ್ಳುತ್ತದೆ. ಟಿವಿ ಮಾಧ್ಯಮದಂತೆ ಇಲ್ಲಿಯೂ ಎರಡು ವಿಭಾಗಗಳನ್ನು ಮಾಡಲಾಗಿದೆ. ಸಾಮಾನ್ಯ ಸುದ್ದಿಗಳನ್ನು ಅದಕ್ಕೆ ಸಂಬಂಧಿಸಿದ ಕಡತದಲ್ಲಿ ದಾಖಲೆ ಮಾಡಿಕೊಳ್ಳಲಾಗುತ್ತದೆ. ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ದಾಖಲೆ ಸಹಿತ ಕಳುಹಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.